ಇಂದೋರ್ ಟೆಸ್ಟ್: ವಿರಾಟ್ ಕೊಹ್ಲಿ 13ನೆ ಶತಕ
ಇಂದೋರ್, ಅ.8: ನ್ಯೂಝಿಲೆಂಡ್ ವಿರುದ್ಧ ಶನಿವಾರ ಇಲ್ಲಿ ಆರಂಭವಾದ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಬಾರಿಸಿದ 13ನೆ ಶತಕದ ನೆರವಿನಿಂದ ಭಾರ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿದೆ.
100 ರನ್‌ಗೆ 3 ವಿಕೆಟ್ ಪತನಗೊಂಡಾಗ ಅಜಿಂಕ್ಯ ರಹಾನೆ(ಔಟಾಗದೆ 79, 172 ಎಸೆತ, 9 ಬೌಂಡರಿ, 1 ಸಿಕ್ಸರ್) ಅವರೊಂದಿಗೆ ಇನಿಂಗ್ಸ್ ಬೆಳೆಸಿದ ಕೊಹ್ಲಿ (103ರನ್, 191 ಎಸೆತ, 10 ಬೌಂಡರಿ) 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 167 ರನ್ ಸೇರಿಸಿದರು.
ಭಾರತ 90 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 267 ರನ್ ಕಲೆ ಹಾಕಿದೆ.
ಸುಮಾರು 2 ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದ ದಿಲ್ಲಿಯ ಎಡಗೈ ಬ್ಯಾಟ್ಸ್‌ಮನ್ ಗಂಭೀರ್ ತನಗೆ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು.
ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಶಿಖರ್ ಧವನ್ ಗಾಯಗೊಂಡಿರುವ ಕಾರಣ ಬಹುದಿನದ ಬಳಿಕ ಮುರಳಿ ವಿಜಯ್ ಅವರೊಂದಿಗೆ ಭಾರತದ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದ ಗಂಭೀರ್ ದೊಡ್ಡ ಮೊತ್ತ ಗಳಿಸದೇ ನಿರಾಸೆಗೊಳಿಸಿದರು.
ಮುರಳಿಯೊಂದಿಗೆ ಮೊದಲ ವಿಕೆಟ್‌ಗೆ 26 ರನ್ ಹಾಗೂ ಚೇತೇಶ್ವರ ಪೂಜಾರರೊಂದಿಗೆ 2ನೆ ವಿಕೆಟ್‌ಗೆ 36 ರನ್ ಜೊತೆಯಾಟ ನಡೆಸಿದ ಗಂಭೀರ್ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಬೀಸಿದ ಎಲ್‌ಬಿಡಬ್ಲು ಬಲೆಗೆ ಬೀಳುವ ಮೊದಲು 53 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದ್ದರು.