×
Ad

ದೇರಳಕಟ್ಟೆ: ‘ಫೊರೆನ್ಸಿಕಾನ್’ ರಾಷ್ಟ್ರೀಯ ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ

Update: 2016-10-08 18:26 IST

ಕೊಣಾಜೆ, ಅ.8: ವೈದ್ಯಕೀಯ ಶಿಕ್ಷಣದಲ್ಲಿ ಕೆಲವೊಮ್ಮೆ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಿಷಯದಲ್ಲಿ ಅವಕಾಶ ಸಿಗದಿದ್ದಾಗ ಫೊರೆನ್ಸಿಕ್‌ನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಆದರೆ ಪ್ರಸ್ತುತ ದಿನಗಳಲ್ಲಿ ಅದರ ಮಹತ್ವ ಅರ್ಥವಾಗಿದೆ. ಫೋರೆನ್ಸಿಕ್ ಕುರಿತಾದ ಅಧ್ಯಯನ ಆಸಕ್ತಿದಾಯಕ ಹಾಗೂ ಸಮಾಜಕ್ಕೆ ಒಳ್ಳೆಯ ಸೇವೆ ಮಾಡಲು ಒಂದು ಉತ್ತಮ ಅವಕಾಶ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ಫೊರೆನ್ಸಿಕ್ ಮೆಡಿಸಿನ್ ಆ್ಯಂಡ್ ಟಾಕ್ಸಿಕೋಲಾಜಿ ವಿಭಾಗದ ಆಶ್ರಯದಲ್ಲಿ ನಡೆದ ಸೌತ್ ಇಂಡಿಯಾ ಮೆಡಿಕೋ ಲೀಗಲ್ ಅಸೋಸಿಯೇಶನ್‌ನ 13ನೆ ರಾಷ್ಟ್ರೀಯ ಸಮ್ಮೇಳನದ ಎರಡನೆಯ ದಿನ ಶನಿವಾರ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ನಡೆದ ರಾಷ್ಟ್ರೀಯ ಸಮ್ಮೆಳನ ಪೊರೆನ್ಸಿಕೋನ್-2016 ಹಾಗೂ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಲ್ಲೆ, ಗಾಯ, ಕೊಲೆ ನಡೆದಾಗ ವೈಜ್ಞಾನಿಕವಾಗಿ ದೇಹದ ಪ್ರತಿ ಅಂಗಗಳ ಕುರಿತು ನಿಖರ ಮಾಹಿತಿ ಕೊಡಲು ಸಾಧ್ಯವಿರುವುದು ಫೊರೆನ್ಸಿಕ್ ವಿಭಾಗದ ತಜ್ಞರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ತಂತ್ರಜ್ಞಾನ ಬಹಳಷ್ಟು ಮುಂದುವರಿದಿದ್ದು ಫೊರೆನ್ಸಿಕ್‌ಗೂ ಆಧುನಿಕ ತಂತ್ರಜ್ಞಾನದ ಅಗತ್ಯವಿದ್ದು ಐಟಿ ಕ್ಷೇತ್ರದ ಜೊತೆಗೆ ಹೊಂದಾಣಿಕೆ ಮಾಡಿಕೊಂಡರೆ ಬಹಳಷ್ಟು ಕ್ರಾಂತಿಕಾರಿ ಬದಲಾವಣೆ ಮಾಡಲು ಸಾಧ್ಯ. ಐಟಿ ಸೆಕ್ಟರ್ ಜೊತೆಗೆ ಫೊರೆನ್ಸಿಕ್ ಜೊತೆಗೂಡಿದರೆ ಜಟಿಲ ಸಮಸ್ಯೆಗಳು ಸುಲಭದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ, ಕೆಲವೊಂದು ಬಾರಿ ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿ ಕುಟುಂಬಿಕರು ಪರಿತಪಿಸುತ್ತಿರುವುದು ಕಂಡಾಗ ಮನಸ್ಸು ನೋಯುತ್ತದೆ. ಕೊಳೆತು ಹೋದ ದೇಹವನ್ನು ಕುಟುಂಬಿಕರೇ ಮುಟ್ಟಲು ಕಷ್ಟಪಡುವ ಸ್ಥಿತಿಯಲ್ಲೂ ತಮ್ಮ ಕರ್ತವ್ಯ ಎಂಬ ನೆಲೆಯಲ್ಲಿ ನ್ಯಾಯಕೊಡುವ ಫೊರೆನ್ಸಿಕ್ ವಿಭಾಗದವರು ಸಲ್ಲಿಸುವ ಸೇವೆ ಮಾನವೀಯತೆಯಿಂದ ಕೂಡಿದ್ದು ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಎಸ್ಪಿ ಜಯಂತ್ ಶೆಟ್ಟಿ, ಬೆಂಗಳೂರಿನ ಫೊರೆನ್ಸಿಕ್ ಸೈನ್ಸ್ ಲ್ಯಾಬೋರೋಟರಿಯ ಡೆಪ್ಯುಟಿ ಡೈರೆಕ್ಟರ್ ರವೀಂದ್ರ ಹಾಗೂ ಮಂಗಳೂರು ರೋಶನಿ ನಿಲಯ ಸಮಾಜಕಾರ್ಯ ವಿಭಾಗದ ಕ್ರಿಮಿನಾಲಜಿ ವಿಭಾಗ ನಿವೃತ್ತ ಮುಖ್ಯಸ್ಥ ಡಾ. ಅಶೋಕ್‌ರನ್ನು ಸನ್ಮಾನಿಸಲಾಯಿತು.

ಕೆಎಂಸಿ ವೀಕ್ಷಕ ಡಾ.ಉದಯ ಕುಮಾರ್ ಉಪಸ್ಥಿತರಿದ್ದರು. ಕ್ಷೇಮಡೀನ್ ಪ್ರೊ.ಡಾ.ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಸೌತ್ ಇಂಡಿಯಾ ಮೆಡಿಕೋ ಲೀಗಲ್ ಎಸೋಸಿಯೇಶನ್‌ನ ಅಧ್ಯಕ್ಷ ಡಾ. ಮಹಾಬಲೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನುಷಾ ಕಾಮತ್ ಹಾಗೂ ತೀಷ್ಟಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಶಹನವಾಝ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News