×
Ad

ಮುಲ್ಕಿ: ಕೆ.ಎಸ್.ರಾವ್ ನಗರ ಶಾಫಿ ಜುಮಾ ಮಸೀದಿಯ ಆಡಳಿತ ಸಮಿತಿ ವಿವಾದಕ್ಕೆ ತೆರೆ

Update: 2016-10-08 19:22 IST

ಮುಲ್ಕಿ, ಅ.8: ಕಳೆದ ಆರು ತಿಂಗಳುಗಳಿಂದ ಮುಲ್ಕಿ ಕೆ.ಎಸ್. ರಾವ್ ನಗರದ ಶಾಫಿ ಜುಮಾ ಮಸೀದಿಯ ಆಡಳಿತ ಸಮಿತಿಯ ವಿಚಾರವಾಗಿ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದೆ. ನಿವೃತ್ತ ಸಬ್‌ಇನ್‌ಸ್ಪೆಕ್ಟರ್ ಮುಹಮ್ಮದ್ ಚುನಾವಣಾಧಿಕಾರಿಯಾಗಿ ನೇಮಕಗೊಂಡು ಕಳೆದ ಶುಕ್ರವಾರ ನಡೆದ ಮಹಾಸಭೆಯಲ್ಲಿ ಹನ್ನೊಂದು ಸದಸ್ಯರನ್ನು ಒಳಗೊಂಡ ನೂತನ ಆಡಳಿತ ಸಮಿತಿಯನ್ನು ಅವಿರೋಧವಾಗಿ ರಚಿಸುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ.

ಕಳೆದ 10 ವರ್ಷಗಳಿಂದ ಕೆ.ಎಸ್.ರಾವ್ ನಗರದ ಶಾಫಿ ಜುಮಾ ಮಸೀದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಖತೀಬರೊಂದಿಗೆ ಸಮಿತಿಯ ಒಂದಿಬ್ಬರು ಸದಸ್ಯರಿಗೆ ಕಳೆದ ಸುಮಾರು 4 ವಷಗಳಿಂದ ವೈಯಕ್ತಿಕ ವೈಷಮ್ಯವಿತ್ತು ಎನ್ನಲಾಗಿದ್ದು, ಖತೀಬ್ ಬದಲಾವಣೆಯಾಗಬೇಕೆಂದು ಒಂದಿಬ್ಬರು ಸದಸ್ಯರು ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಆದರೆ, ಜಮಾಅತ್‌ನ ಹೆಚ್ಚಿನ ಸದಸ್ಯರು ಹಾಗೂ ಜಮಾಅತ್‌ನ ಶೇ.80ರಷ್ಟು ಕುಟುಂಬಗಳು ಖತೀಬ್ ಬದಲಾವಣೆಯ ಬದಲು ಸಮಿತಿಯನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ಮಧ್ಯೆ ಕಳೆದ ಬಕ್ರೀದ್‌ನ ಬಳಿಕ ಖತೀಬ್ ಕೆಲಸ ಬಿಟ್ಟು ಬೇರೆಡೆಗೆ ತೆರಳಿದ್ದರು.

ಇದಾದ ಬಳಿಕ ಸಮಿತಿ ಬದಲಾವಣೆಯಾಗಬೇಕೆಂಬ ನಿಟ್ಟಿನಲ್ಲಿ ವಿವಾದ ತೀವ್ರಗೊಂಡಿದ್ದು, ಈ ಬಗ್ಗೆ ಮಧ್ಯಪ್ರವೇಶಿಸಬೇಕು ಎಂದು ಆಡಳಿತ ಸಮಿತಿ ಹಾಗೂ ಜಮಾತಿಗರು ನ್ಯಾಯಕ್ಕಾಗಿ ವಕ್ಫ್‌ಬೋರ್ಡ್‌ನ ಕದ ತಟ್ಟಿದ್ದರು. ಈ ಸಂಬಂಧ ವಕ್ಫ್‌ಬೋರ್ಡ್‌ನ ಅಧಿಕಾರಿಗಳು ಎರಡೂ ತಂಡಗಳನ್ನು ಕರೆಸಿ ಎರೆಡೆರಡು ಬಾರಿ ನಡೆಸಿದ್ದ ಸಭೆಗಳು ಫಲಪ್ರದವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಆಡಳಿತ ಸಮಿತಿ ಹಾಗೂ ಜಮಾಅತಿಗರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆಯ ಮೂಲಕ ಆಡಳಿತ ಸಮಿತಿ ರಚಿಸುವಂತೆ ನಿವೃತ್ತ ಸಬ್ ಇನ್‌ಸೆಕ್ಟರ್ ಮುಹಮ್ಮದ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಿ ರಾಜ್ಯ ವಕ್ಫ್‌ಬೋರ್ಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸೂಚಿಸಿದ್ದರು.

ಅದರಂತೆ ಸಮಿತಿಯ ಮಾಜಿ ಸದಸ್ಯ ಹಾಗೂ ಮುಲ್ಕಿ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ಬಿ.ಎಂ.ಆಸೀಫ್, ಎ.ಎಚ್. ಖಾದರ್, ಎ.ಎಚ್. ರಫೀಕ್ ಅವರನ್ನು ಸಂಪರ್ಕಿಸಿ ಈ ಸಂಬಂಧ ಮಾತುಕತೆಗಳನ್ನು ನಡೆಸಿದ್ದರು. ಅದರಂತೆ ಕಳೆದ ಶುಕ್ರವಾರ ಕೆಎಸ್‌ರಾವ್ ನಗರದ ಜಮಾಅತ್ ಸಮಿತಿ ಹಾಗೂ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡ ಚುನಾವಣಾಧಿಕಾರಿ ಮುಹಮ್ಮದ್ ಚುನಾವಣೆ ರಹಿತವಾಗಿ ಹನ್ನೊಂದು ಮಂದಿ ಸಮಿತಿ ಸದಸ್ಯರು ಹಾಗೂ ಇಬ್ಬರು ಸಲಹೆಗಾರರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸುವಲ್ಲಿ ಸಫಲರಾದೆವು ಎಂದು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

 ಈ ಸಂಬಂಧ ನೂತನ ಸಮಿತಿಯ ವಿವರಗಳನ್ನೊಳಗೊಂಡ ವರದಿಯನ್ನು ಶೀಘ್ರ ರಾಜ್ಯ ವಕ್ಫ್ ಬೋರ್ಡ್‌ಗೆ ಕಳುಹಿಸಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ ಸುಮಾರು 10 ವರ್ಷಗಳಿಂದ ನಾನು ಅಲ್ಲಿ ಖತೀಬ್ ಆಗಿ ಕೆಲಸ ನಿರ್ವಹಿಸುತ್ತಿದ್ದೆ. ಆದರೆ ಅಲ್ಲಿನ ಬೆರಳೆಣಿಕೆಯ ಒಂದಿಬ್ಬರು ಸದಸ್ಯರಿಗೆ ನನ್ನೊಂದಿಗೆ ವೈಯಕ್ತಿಕ ಕಾರಣಗಳಿಂದ ವೈಷಮ್ಯವಿತ್ತು. ಇದೇ ಕಾರಣವನ್ನು ಮುಂದಿಟ್ಟು ಕೊಂಡು ಖತೀಬ್ ಬದಲಾವಣೆಯಾಗಬೇಕೆಂದು ಹೇಳುತ್ತಿದ್ದರು. ಒಂದು ಉತ್ತಮ ಜಮಾಅತ್‌ನ ಒಳಗೆ ಮನಸ್ತಾಪ ಬೇಡ ಎಂದು ಹಲವು ಬಾರಿ ಕೆಲಸ ಬಿಡುವ ನಿರ್ಧಾರ ಮಾಡಿದ್ದೆ. ಆದರೆ, ಅಲ್ಲಿನ ಜನರು ಕೆಲಸ ಬಿಟ್ಟರೆ ಜಮಾತ್‌ ತೊರೆಯುವುದಾಗಿ ಹೇಳುತ್ತಿದ್ದರು. ಮತ್ತು ಕೆಲಸದಲ್ಲಿ ಮುಂದುವರಿಯುವಂತೆ ಆಗ್ರಹಿಸುತ್ತಿದ್ದರು. ಇದರಿಂದ ನಿವಾರ್ಯವಾಗಿ ಕೆಲಸ ಮಾಡಬೇಕಾಗಿತ್ತು. ಆದರೆ, ಇತ್ತೀಚೆಗೆ ಜಮಾತ್‌ನ ಒಳಗೆ ವೈಮನಸ್ಸು ಹೆಚ್ಚಾಗುತ್ತಿರುವುದನ್ನು ಗಮನಸಿ ಕಳೆದ ಬಕ್ರೀದ್‌ನ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದೇನೆ.

ಇಸ್ಹಾಕ್ ಫೈಝಿ,  ಮಾಜಿ ಖತೀಬ್, ಶಾಫಿ ಜುಮಾ ಮಸೀದಿ, ಕೆ.ಎಸ್.ರಾವ್ ನಗರ.

ಖತೀಬ್ ಇಸಾಕ್ ಪೈಝಿಯವರು ಆಡಳಿತ ಸಮಿತಿಯೊಂದಿಗೆ ಒಮ್ಮತದೊದಿಗೆ ಬೆರೆಯುತ್ತಿದ್ದರು. ಕಳೆದ ಮೂರು ಬಾರಿ ಕೆಲಸ ಬಿಡುವುದಾಗಿ ತಿಳಿಸಿದಾಗಲೂ ನಾನು ತಡೆದಿದ್ದೆ. ಆದರೆ ಈ ಬಾರಿ ಅವರು ಮನನೊಂದು ತೆರಳಿದ್ದಾರೆ. ಅವರು ಉತ್ತಮ ವಾಗ್ಮಿ. ಎಲ್ಲರೊಂದಿಗೂ ಬೆರೆಯುತ್ತಿದ್ದರು. ಅವರು ಮಸೀದಿಯನ್ನು ತೊರೆದಿರುವುದು ಬೇಸರ ತಂದಿದೆ.

ಮುಸ್ತಫಾ, ಮಾಜಿ ಅಧ್ಯಕ್ಷರು, ಶಾಫಿ ಜುಮಾ ಮಸೀದಿ, ಕೆ.ಎಸ್.ರಾವ್ ನಗರ.

ಜಮಾತಿಗರೇ ಕುಳಿತು ಚರ್ಚಿಸಿ ಬಗೆಹರಿಸಬಹುದಾದ ಸಣ್ಣಪುಟ್ಟ ಸಮಸ್ಯೆಗಳು ವಕ್ಫ್‌ಬೋರ್ಡ್, ನ್ಯಾಯಾಲಯಗಳ ಬಾಗಿಲವರೆಗೂ ಹೋಗುತ್ತಿವೆ. ಎಲ್ಲಾ ರೀತಿಯ ಸಮಸ್ಯೆಗಳಿಗೂ ನಮ್ಮಲ್ಲಿಯೇ ಪರಿಹಾರಗಳಿರುತ್ತವೆ. ಆದರೆ, ತಾಳ್ಮೆಯಿಂದ ಯೋಚಿಸುವ, ಪರಿಹಾರ ಕಂಡುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಜಮಾಅತ್ ಸಮಿತಿಗಳು ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಮುನ್ನಡೆದರೆ ಯಾವುದೆ ರೀತಿಯ ತೊಂದರೆಗಳು ಬರುವುದಿಲ್ಲ. 

ಮುಹಮ್ಮದ್ (ನಿವೃತ್ತ ಸಬ್ ಇನ್‌ಸ್ಪೆಕ್ಟರ್),  ಚುನಾವಣಾಧಿಕಾರಿ, ಕೆ.ಎಸ್. ರಾವ್ ನಗರ ಶಾಫಿ ಜುಮಾ ಮಸೀದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News