ಭಾಷಾಭಿಮಾನವಿಲ್ಲದಿದ್ದರೆ ಬ್ಯಾರಿ ಭಾಷೆ ಅಭಿವೃದ್ಧಿ ಹೊಂದದು: ಬಿ.ಎ. ಮೊಹಿದಿನ್

Update: 2016-10-08 14:46 GMT

ಮಂಗಳೂರು, ಅ.8: ಬ್ಯಾರಿ ಭಾಷೆಯ ಬೆಳವಣಿಗೆಗೆ ಬ್ಯಾರಿ ಬಾಷೆಯನ್ನಾಡುವ ಮಂದಿ ಭಾಷಾಭಿಮಾನವನ್ನು ಹೊಂದಿರಬೇಕು. ಭಾಷಾಭಿಮಾನವಿಲ್ಲದಿದ್ದರೆ ಬ್ಯಾರಿ ಭಾಷೆ ಅಭಿವೃದ್ದಿ ಹೊಂದುವುದಿಲ್ಲ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಹಾಜಿ ಬಿ. ಎ. ಮೊಹಿದಿನ್ ಹೇಳಿದರು.

ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಭಾಷಾ ಸಪ್ತಾಹದ ಅಂಗವಾಗಿ ನಗರದ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬ್ಯಾರಿ ಕೂಡುಕಟ್ಟ್ ಮತ್ತು ಸಂವಾದ ಕಾರ್ಯಕ್ರಮದಲ್ಲಿ ನಡೆದ ನೇರಸಂವಾದದಲ್ಲಿ ಮಾತನಾಡಿದರು.

ಭಾಷೆಗೆ ಯಾವುದೆ ಚೌಕಟ್ಟು ಇಲ್ಲ. ಬ್ಯಾರಿ ಭಾಷೆ ಅಳಿವಿನಂಚಿನಲ್ಲಿರುವ ಭಾಷೆಯಲ್ಲ. ಅದೊಂದು ಜೀವಂತ ಭಾಷೆ. ಇದು ಎಲ್ಲಾ ಜನರಿಗೂ ಗೊತ್ತಿದೆ. ಭಾಷೆಯ ಬೆಳವಣಿಗೆಗೆ ಶಬ್ದಕೋಶದ ಅಗತ್ಯವಿದೆ. ಈ ಕೆಲಸವನ್ನು ಅಕಾಡಮಿಯು ಮಾಡುತ್ತಿದೆ. ಬ್ಯಾರಿ ಭಾಷೆಯಲ್ಲಿಯೂ ಉತ್ಕೃಷ್ಟ ಸಾಹಿತ್ಯ ಬರಬೇಕು. ಈ ನಿಟ್ಟಿನಲ್ಲಿ ಕೆಲಸವಾಗಬೇಕು ಎಂದು ಅವರು ಹೇಳಿದರು.

ಯಾವುದೆ ಭಾಷೆಯ ಬೆಳವಣಿಗೆ ತತ್‌ಕ್ಷಣ ಆಗುವುದಿಲ್ಲ. ಕನ್ನಡದಲ್ಲಿ ಇರುವ ಭಾಷಾಭಿಮಾನ ಬ್ಯಾರಿ ಭಾಷೆಯಲ್ಲಿಯೂ ಮೂಡಿ ಬರಬೇಕು ಎಂದರು. ಬ್ಯಾರಿ ಭಾಷೆ ಆಡುಭಾಷೆಯಾಗಿದ್ದು ಅದನ್ನು ವ್ಯವಹಾರ, ದೈನಂದಿನ ಜೀವನದಲ್ಲಿ ಅಳವಡಿಸಲಾಗಿಲ್ಲ. ಬ್ಯಾರಿ ಭಾಷೆಯಲ್ಲಿ ಓದುವುದು ಸುಲಭವಲ್ಲ. ಅದನ್ನು ಸರಳವಾಗಿ ಓದುವ ರೀತಿ ಆಗಬೇಕು ಎಂದರು.

ಸಂವಾದವನ್ನು ಪತ್ರಕರ್ತ ಬಿ.ಎಂ.ಹನೀಫ್ ನಿರ್ವಹಣೆ ಮಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್  ಅಧ್ಯಕ್ಷತೆಯನ್ನು ವಹಿಸಿದ್ದರು.

ಬಶೀರ್ ಬೈಕಂಪಾಡಿ, ಕೆ.ಪಿ.ಅಬ್ದುಲ್ ಖಾದರ್ ಕುತ್ತೆತ್ತೂರು, ಮರಿಯಮ್ ಇಸ್ಮಾಯೀಲ್, ನಿಸಾರ್ ಮುಹಮ್ಮದ್, ಹಂಝ ಮಲಾರ್, ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಸಕೀನ ಯಹ್ಯಾ ಸಂವಾದದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮನಪಾ ಸದಸ್ಯ ಮುಹಮ್ಮದ್ ಕುಂಜತ್ತಬೈಲ್, ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್, ಉದ್ಯಮಿ ಜಲೀಲ್ ಕೃಷ್ಣಾಪುರ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಟಿ.ಎ. ಆಲಿಯಬ್ಬ ಜೋಕಟ್ಟೆ , ಸದಸ್ಯರಾದ ಕೆ.ಇದಿನಬ್ಬ ಬ್ಯಾರಿ, ಯೂಸುಫ್ ವಕ್ತಾರ್, ಅಬ್ಬಾಸ್ ಕಿರುಗುಂದ, ಮುಹಮ್ಮದ್ ಝಕರಿಯ್ಯ, ಮುಹಮ್ಮದ್ ಶರೀಫ್ ನಿರ್ಮುಂಜೆ ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು, ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ವಂದಿಸಿದರು. ಸದಸ್ಯ ಅಬ್ದುಲ್ಲತೀಫ್ ನೇರಳಕಟ್ಟೆ ನಿರೂಪಿಸಿದರು.

ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಬಾರದು ಎಂದು ಇಸ್ಲಾಂನಲ್ಲಿ ಹೇಳಿಲ್ಲ. ಆದರೆ ಹೆಣ್ಣು ಮಕ್ಕಳು ಇದೀಗ ವಿದ್ಯಾಭ್ಯಾಸ ಪಡೆಯುತ್ತಿರುವುದರಿಂದ ಅವರಿಗೆ ಮದುವೆ ಸಂದರ್ಭದಲ್ಲಿ ಸಮಸ್ಯೆಯಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಈ ಅಪಪ್ರಚಾರ ವಾಸ್ತವತೆಗಿಂತ ಭಿನ್ನವಾಗಿದೆ. ವಿದ್ಯೆಗೂ ಮದುವೆಗೂ ಸಂಬಂಧವಿಲ್ಲ. ವಿದ್ಯೆ ಕಡಿಮೆಯಿರುವ ಹಲವು ಹೆಣ್ಣು ಮಕ್ಕಳು ಸಮಾಜದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವುದನ್ನು ಗಮನಿಸಬೇಕಾಗಿದೆ.

ಅಪರಾಧ ಚಟುವಟಿಕೆಗಳಲ್ಲಿ ಬ್ಯಾರಿ ಸಮುದಾಯದ ಕೆಲವು ಯುವಕರು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ. ಹಿಂದೆ ಈ ರೀತಿ ಇರುತ್ತಿರಲಿಲ್ಲ. ಶೀಘ್ರ ದುಡ್ಡು ಮಾಡಬೇಕೆಂಬ ಹಂಬಲದಿಂದ ದಾರಿ ತಪ್ಪುತ್ತಿರುವ ಯುವಕರಿಗೆ ಮನವರಿಕೆ ಮಾಡಬೇಕಾಗಿದೆ. ಅಪ್ರಾಮಾಣಿಕವಾಗಿ ದುಡ್ಡ ಮಾಡಿ ಧಾರ್ಮಿಕ ಕ್ಷೇತ್ರದಲ್ಲಿ ಕೈಯಾಡಿಸುತ್ತಿರುವುದರ ವಿರುದ್ಧ ಯಾರೂ ಧ್ವನಿಯೆತ್ತುತ್ತಿಲ್ಲ. ಯುವಜನಾಂಗಕ್ಕೆ ನಮ್ಮ ಸಂಸ್ಕೃತಿ ,ಭಾಷೆ, ಸಂಸ್ಕಾರ ಕಲಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ.

 - ಬಿ.ಎ.ಮೊಹಿದಿನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News