ಸಾಹಿತ್ಯದಿಂದ ಆಂತರಿಕ ಪರಿವರ್ತನೆ ಸಾಧ್ಯ: ಪ್ರೊ.ನಿಸ್ಸಾರ್ ಅಹ್ಮದ್
ಉಡುಪಿ, ಅ. 8: ಒಂದು ಕಾಲದಲ್ಲಿ ಸಾಹಿತ್ಯದಿಂದಲೇ ದೇಶ ಬದಲಾಗುತ್ತದೆ ಎಂಬ ಕಲ್ಪನೆ ನಮ್ಮೆಲ್ಲರಲ್ಲಿತ್ತು. ಅನಂತರ ಆ ಬಣ್ಣದ ಬಲೂನ್ ಒಡೆದುಹೋಯಿತು. ಸಾಹಿತ್ಯದಿಂದ ಆಂತರಿಕ ಪರಿವರ್ತನೆ ಮಾತ್ರ ಸಾಧ್ಯ ಎಂದು ಹಿರಿಯ ಕವಿ, ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಡೋಜ ಪ್ರೊ.ಕೆ.ಎಸ್.ನಿಸ್ಸಾರ್ ಅಹ್ಮದ್ ಹೇಳಿದ್ದಾರೆ.
ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಶರನ್ನವರಾತ್ರಿ ವಿಶೇಷ ಸಾಹಿತ್ಯ ಉಪನ್ಯಾಸ ಸರಣಿಯಲ್ಲಿ ಇಂದು ಸಂಜೆ ‘ನನ್ನ ಲೇಖನ ಉದ್ಯಮ’ ವಿಷಯದ ಕುರಿತು ಅವರು ಮಾತನಾಡುತಿದ್ದರು. ಸಾಹಿತ್ಯ ನಾಗರಿಕತೆಯನ್ನು ಬೆಳೆಸುವುದಿಲ್ಲ, ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದವರು ನುಡಿದರು. ನನ್ನೊಳಗಿನ ಆಂತರಿಕ ಸಂಘರ್ಷದಿಂದ ಅನೇಕ ಕವನಗಳು ರಚನೆಗೊಂಡವು ಎಂದೂ ನಿಸ್ಸಾರ್ ಅಹ್ಮದ್ ಹೇಳಿದರು.
‘ಸ್ತೋತ್ರ ಸಾಹಿತ್ಯ’ ಎಂಬ ವಿಷಯದ ಕುರಿತು ಮಾತನಾಡಿದ ಹಿರಿಯ ವಿಮರ್ಶಕ, ಲೇಖಕ ಡಾ.ಸಿ.ಎನ್.ರಾಮಚಂದ್ರನ್, ವೇದಮಂತ್ರಗಳ ಸಹಿತ ಸ್ತೋತ್ರ ಸಾಹಿತ್ಯಗಳು ಸೃಷ್ಟಿ, ಬದುಕಿನ ರಹಸ್ಯಗಳನ್ನು ಅರಿಯಲು ಸಂಕೀರ್ಣತೆಯ ಅತ್ಯಂತ ಚಿಂತನಾಪೂರ್ಣ ವಿಚಾರಗಳನ್ನು ಸಾರುತ್ತವೆ ಎಂದರು. ಮಂತ್ರಪುಷ್ಪ ಸ್ತೋತ್ರ ಸಾಮಾನ್ಯವೆಂದು ಪರಿಗಣಿಸಿದರೂ ಅದರಲ್ಲಿ ಗಂಭೀರವಾದ ಚಿಂತನೆಗಳಿವೆ. ಸೃಷ್ಟಿಯಾಗುವುದು ನೀರಿನಿಂದ ಎಂಬರ್ಥ ದಲ್ಲಿ ನೀರಿನ ಬಗ್ಗೆ ಚಿಂತನೆಗಳನ್ನು ಮಾಡಲಾಗಿದೆ ಎಂದು ರಾಮಚಂದ್ರನ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವೇ ತೀರ್ಥ ಶ್ರೀಪಾದರು ನಿಸ್ಸಾರ್ ಅವರ ಪುರಂದರದಾಸರ ಕುರಿತಾದ ಕವನ ವನ್ನು, ಪ್ರೊ.ರಾಮಚಂದ್ರನ್ ಅವರು ದಾಸರ ಹಾಡಿಗೆ ಗಂಭೀರ ಅರ್ಥ ಬೆಟ್ಟುಮಾಡಿದ್ದನ್ನು ಉಲ್ಲೇಖಿಸಿದರು. ಜಗತ್ತು ದೇವರಿಂದಾಯಿತು ಎಂದು ಸುಮ್ಮನೆ ಕುಳಿತುಕೊಳ್ಳದೆ ಮನುಷ್ಯ ಪ್ರಯತ್ನವನ್ನು ಮಾಡಬೇಕು ಎಂಬ ಪೇಜಾವರ ಶ್ರೀಗಳು ಹೇಳಿದರು.
ಎಸ್.ಪ್ರದೀಪ್‌ಕುಮಾರ್ ಕಲ್ಕೂರ ಸ್ವಾಗತಿಸಿದರು.