×
Ad

ನ್ಯಾಟೋ ರಾಷ್ಟ್ರಗಳ ಗಡಿಯಲ್ಲಿ ರಶ್ಯದಿಂದ ಅಣ್ವಸ್ತ್ರ ಕ್ಷಿಪಣಿ ನಿಯೋಜನೆ

Update: 2016-10-09 23:55 IST

   ವಿನಿಯಸ್,ಅ.9: ರಶ್ಯವು ಅಣ್ವಸ ವಾಹಕ ಸಾಮರ್ಥ್ಯವಿರುವ ತನ್ನ ‘ಇಸ್ಕಾಂಡರ್’ ಕ್ಷಿಪಣಿಗಳನ್ನು ನ್ಯಾಟೊ ಸದಸ್ಯ ರಾಷ್ಟ್ರಗಳಾದ ಪೊಲ್ಯಾಂಡ್ ಹಾಗೂ ಲಿಥುವಾನಿಯಾ ನಡುವೆ ಇರುವ ತನ್ನ ಕ್ಯಾಲಿನಿನ್‌ಗ್ರಾಡ್ ಹೊರಠಾಣೆಯಲ್ಲಿ ನಿಯೋಜಿಸಿದೆ. ಸಿರಿಯ ಹಾಗೂ ಉಕ್ರೇನ್‌ನಲ್ಲಿ ನಡೆಯುವ ಅಂತರ್ಯುದ್ಧದಲ್ಲಿ ತಮ್ಮ ನಿಲುವನ್ನು ಸಡಿಲುಗೊಳಿಸುವಂತೆ ಅಮೆರಿಕ ನೇತೃತ್ವದ ಮಿತ್ರಪಡೆಗಳ ಮೇಲೆ ಒತ್ತಡ ಹೇರುವ ತಂತ್ರ ಇದಾಗಿದೆಯೆಂದು ಪಾಶ್ಚಾತ್ಯ ಮಾಧ್ಯಮಗಳು ಬಣ್ಣಿಸಿವೆ.
ಸಿರಿಯದಲ್ಲಿ ರಶ್ಯವು ಅಲ್ಲಿನ ಅಧ್ಯಕ್ಷ ಬಶೀರ್ ಅಸ್ಸಾದ್ ಪರವಾಗಿ ಬಂಡುಕೋರರ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ರಶ್ಯದ ವಾಯುಪಡೆಗಳ ಬಾಂಬ್ ದಾಳಿಯಿಂದಾಗಿ ಹಲವಾರು ನಾಗರಿಕ ಸಾವುನೋವುಗಳು ಸಂಭವಿಸಿದ್ದು, ದಾಳಿಯನ್ನು ನಿಲ್ಲಿಸುವಂತೆ ಅಮೆರಿಕ ನೇತೃತ್ವದ ಮಿತ್ರಪಡೆಗಳು ಆಗ್ರಹಿಸುತ್ತಿವೆ.

  ಸುಧಾರಿತ ಇಸ್ಕಾಂಡರ್ ಕ್ಷಿಪಣಿಗಳು 700 ಕಿ.ಮೀ.ವರೆಗೆ ಚಲಿಸುವ ಸಾಮರ್ಥ್ಯ ಹೊಂದಿವೆ. ಪೊಲ್ಯಾಂಡ್ ಹಾಗೂ ಲಿಥುವಾನಿಯಾ ನಡುವೆ ಇರುವ ರಶ್ಯದ ನಗರ ಎಕ್ಸ್‌ಕ್ಲೇವ್‌ನಿಂದ ಈ ಕ್ಷಿಪಣಿಗಳು ಜರ್ಮನಿಯ ರಾಜಧಾನಿ ಬರ್ಲಿನ್‌ವರೆಗೂ ತಲುಪಬಹುದೆಂದು ಲಿಥುವಾನಿಯಾ ವಿದೇಶಾಂಗ ಸಚಿವ ಲಿನಾಸ್ ಲಿಂಕೆವಿಸಿಯಸ್ ತಿಳಿಸಿದ್ದಾರೆ.

  2015ರಲ್ಲಿ ಉಕ್ರೇನ್ ಯುದ್ಧಕ್ಕೆ ಸಂಬಂಸಿ ಪಶ್ಚಿಮದ ರಾಷ್ಟ್ರಗಳ ಜೊತೆ ಉದ್ವಿಗ್ನ ಸ್ಥಿತಿ ಏರ್ಪಟ್ಟ ಸಂದರ್ಭದಲ್ಲಿಯೂ ರಶ್ಯವು ಕ್ಯಾಲಿನಿನ್‌ಗಾರ್ಡ್‌ಗೆ ಇಸ್ಕಾಂಡರ್ ಕ್ಷಿಪಣಿಗಳನ್ನು ಕಳುಹಿಸಿತ್ತು ಹಾಗೂ ಸೇನಾಕವಾಯತುಗಳನ್ನು ಆಯೋಜಿಸಿತ್ತು.ರಶ್ಯವು ಉಕ್ರೇನ್‌ನಿಂದ ಕ್ರಿಮಿಯಾ ಪ್ರಾಂತವನ್ನು ವಶಪಡಿಸಿಕೊಂಡ ಬಳಿಕ ಹಾಗೂ ಸಿರಿಯದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದ ಬಳಿಕ, ಮಾಸ್ಕೊ ಜೊತೆ ಪಾಶ್ಚಾತ್ಯ ರಾಷ್ಟ್ರಗಳ ಬಾಂಧವ್ಯವು ಮತ್ತೆ ಹದಗೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News