×
Ad

ಫವಾದ್ ಮುಖಕ್ಕೆ ಕರಣ್ ಜೋಡಿಸಲಿದ್ದಾರೆ ಈ ಭಾರತೀಯ ನಟನ ಮಖ

Update: 2016-10-10 14:20 IST

►ಚಿತ್ರದಲ್ಲಿ  ಇತರ ಬದಲಾವಣೆ ಕೂಡ ಸಾಧ್ಯತೆ

ಮುಂಬೈ,ಅ.10 ಖ್ಯಾತ ಬಾಲಿವುಡ್ ನಿರ್ಮಾಪಕ-ನಿರ್ದೇಶಕ ಕರಣ ಜೋಹರ್ ಅವರು ಪಾಕಿಸ್ತಾನಿ ಕಲಾವಿದರು ಮತ್ತು ಗಾಯಕರ ಮೇಲಿನ ನಿಷೇಧವನ್ನು ಬಲವಾಗಿ ವಿರೋಧಿಸಿದ್ದು ಇನ್ನೂ ಜನಮನದಿಂದ ಮಾಸಿಲ್ಲ. ಆದರೆ ಅವರ ಮಾತಿಗೂ ಕೃತಿಗೂ ತಾಳಮೇಳವಿಲ್ಲದಂತಾಗಿದೆ. ತನ್ನ ಮುಂಬರುವ ಚಿತ್ರ ‘ಎ ದಿಲ್ ಹೈ ಮುಷ್ಕಿಲ್ ’ ಚಿತ್ರದಲ್ಲಿ ನಾಯಕ ನಟನ ಪಾತ್ರವನ್ನು ನಿರ್ವಹಿಸಬೇಕಾಗಿದ್ದ ಪಾಕ್ ನಟ ಫವಾದ್ ಖಾನ್ ಅವರ ಬದಲಿಗೆ ಸೈಫ್ ಅಲಿ ಖಾನ್ ಅವರನ್ನು ಹಾಕಿಕೊಳ್ಳಲು ಅವರು ಯೋಜಿಸಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಅಲ್ಲದೆ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ಐಶ್ವರ್ಯಾ ರೈ ಅವರ ಪಾತ್ರಗಳ ರಾಷ್ಟ್ರೀಯತೆಯನ್ನೂ ಅವರು ಬದಲಿಸಬಹುದು.

ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಎಂಎನ್‌ಎಸ್ 48 ಗಂಟೆಗಳಲ್ಲಿ ಭಾರತವನ್ನು ತೊರೆಯುವಂತೆ ಪಾಕಿಸ್ತಾನಿ ಕಲಾವಿದರಿಗೆ ಸೂಚಿಸಿತ್ತು. ಚಲನಚಿತ್ರ ನಿರ್ಮಾಪಕರ ಸಂಘ ಇಂಪಾ ಕೂಡ ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಸುಧಾರಣೆಯಾಗುವವರೆಗೂ ಭಾರತೀಯ ಚಿತ್ರಗಳಲ್ಲಿ ಪಾಕ್ ಕಲಾವಿದರು ಮತ್ತು ತಂತ್ರಜ್ಞರ ಮೇಲೆ ನಿಷೇಧ ಹೇರಿತ್ತು.

   ಪಾಕ್ ಕಲಾವಿದರಾದ ಫವಾದ್ ಖಾನ್ ಮತ್ತು ಮಹಿರಾ ಖಾನ್ ಅವರ ನಟನೆಯ ‘ಏ ದಿಲ್ ಹೈ ಮುಷ್ಕಿಲ್’ ಮತ್ತು ‘ರಯೀಸ್’ ಚಿತ್ರಗಳ ಬಿಡುಗಡೆಗೆ ತಾನು ಅವಕಾಶ ನೀಡುವುದಿಲ್ಲವೆಂದೂ ಎಂಎನ್‌ಎಸ್ ಬೆದರಿಕೆಯೊಡ್ಡಿತ್ತು. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿರುವ ಚಿತ್ರಗಳ ಬಿಡುಗಡೆಗೆ ಯಾವುದೇ ತೊಂದರೆಯಿಲ್ಲ ಎಂದು ಇಂಪಾ ಭರವಸೆ ನೀಡಿತ್ತು. ಕರಣ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್‌ನ ಕೆಲವರು ಪಾಕ್ ಕಲಾವಿದರ ಮೇಲಿನ ನಿಷೇಧವನ್ನು ಬಲವಾಗಿ ವಿರೋಧಿಸಿದ್ದರಲ್ಲದೆ, ಕಲೆ ಮತ್ತು ರಾಜಕೀಯವನ್ನು ಬೆರೆಸಬಾರದು ಎಂದು ಹೇಳಿದ್ದರು.

 ‘ಎ ದಿಲ್ ಹೈ ಮುಷ್ಕಿಲ್’ ಚಿತ್ರದೊಂದಿಗೆ ನಾಲ್ಕು ವರ್ಷಗಳ ನಂತರ ಕರಣ್ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಚಿತ್ರದಲ್ಲಿ ಐಶ್ವರ್ಯಾ ಕವಯಿತ್ರಿ ಸಬಾ ತಾಲಿಯಾರ್ ಖಾನ್ ಪಾತ್ರದಲ್ಲಿದ್ದರೆ, ತನ್ನ ಪ್ರೇಮಿ(ಫವಾದ್)ಯನ್ನು ಕಳೆದುಕೊಂಡು ಹೊಸ ಪ್ರೇಮಿ(ರಣಬೀರ್)ಯನ್ನು ಕಂಡುಕೊಂಡಿರುವ ಅಲಿಝೆ ಪಾತ್ರವನ್ನು ಅನುಷ್ಕಾ ಶರ್ಮಾ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News