×
Ad

ವಿಶಾಲ ಮನಸ್ಸಿನ ಯುವಕರಿಂದ ಬಲಿಷ್ಠ ರಾಷ್ಟ್ರ: ಸಂತೋಷ್ ಕುಮಾರ್

Update: 2016-10-11 13:38 IST

ಕೊಣಾಜೆ, ಅ.11: ನಮ್ಮ ದೇಶ ಯುವ ರಾಷ್ಟ್ರವಾಗಿದ್ದು, ವಿಶಾಲ ಮನಸ್ಸಿನ ಯುವಕರಿಂದ ಬಲಿಷ್ಟ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅಭಿಪ್ರಾಯಪಟ್ಟಿದ್ದಾರೆ.

ಕೊಣಾಜೆ ಗ್ರಾಮದ ಶಾರದಾ ನಗರದ ಸಪ್ತಸ್ವರ ಕಲಾಕೇಂದ್ರದ ಆಶ್ರಯದಲ್ಲಿ ನಡೆಯುವ ಶಾರದೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾಜದಿಂದ ನಾವೇನು ಬಯಸದೆ ಸಮಾಜಕ್ಕಾಗಿ ನಮ್ಮಿಂದಾದ ಕೊಡುಗೆ ಕೊಡುವ ಮನಸ್ಸು ನಮ್ಮದಾಗಬೇಕು. ಇಂತಹ ಸಮಾಜಸೇವಾ ಮನೋಭಾವನೆಯನ್ನು ಪ್ರತಿಯೊಬ್ಬರಲ್ಲಿ ಬೆಳೆಸಬೇಕು. ಕಳೆದ ಹಲವಾರು ವರ್ಷದಿಂದ ಕೊಣಾಜೆಯ ಸಪ್ತಸ್ವರ ಕಲಾ ತಂಡವು ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು.

 ಉದ್ಯಮಿ ಮುಖೇಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ರತ್ನಾಕಾರ ಜೈನ್ ಅವರು ವಹಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ, ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಘಟನಾ ಅಧಿಕಾರಿ ಚಂದ್ರಕಲಾ ರಾಮಚಂದ್ರ, ಉದ್ಯಮಿ ಪ್ರಸಾದ್ ರೈ ಕಲ್ಲಿಮಾರ್, ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ದೇವಿಪ್ರಸಾದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಸಪ್ತಸ್ವರ ಕಲಾ ಕೇಂದ್ರದ ಉಪಾಧ್ಯಕ್ಷ ಹರೀಶ್ ಕೊಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಹಾಗೂ ನಿವೃತ್ತ ಗ್ರಾಮ ಸಹಾಯಕ ನಾರಾಯಣ ಸಪಲ್ಯ ಅವರನ್ನು ಗ್ರಾಮ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಪ್ತಸ್ವರ ಕಲಾ ತಂಡದ ಅಧ್ಯಕ್ಷರು ಹಾಗೂ ಮಾತೃಮಂಡಳಿಯ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳಾದ ಭೂಮಿಕಾ ಗಟ್ಟಿ ಕೊಣಾಜೆ, ನಿರೀಕ್ಷಾ ಹಾಗೂ ಸ್ವಾತಿ ಪಿ.ಗಟ್ಟಿ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News