ಪಾಣೆಮಂಗಳೂರು ಮೀನು ಮಾರುಕಟ್ಟೆ ಅವ್ಯವಸ್ಥೆಗೆ ಮೀನು ಮಾರಾಟಗಾರರ ಅಸಮಾಧಾನ
ವಿಟ್ಲ, ಅ.11: ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನಲ್ಲಿ ಇತ್ತೀಚೆಗಷ್ಟೆ ನಿರ್ಮಾಣಗೊಂಡಿರುವ ನೂತನ ಮೀನು ಮಾರುಕಟ್ಟೆ ಕಾರ್ಯಾರಂ ಮಾಡಿದ್ದರೂ ಇಲ್ಲಿನ ವ್ಯಾಪಾರಿಗಳು ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ತೀವ್ರ ಅಸಮಾಧಾನ ಹೊರಗೆಡಹಿದ್ದಾರೆ.
ನ್ಯಾಷನಲ್ ಫಿಶರೀಸ್ ಬೋರ್ಡ್ ವತಿಯಿಂದ 47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪಾಣೆಮಂಗಳೂರು ಪೇಟೆಯ ಸುಸಜ್ಜಿತ ಮೀನು ಮಾರುಕಟ್ಟೆಗೆ ಒಂದೂವರೆ ವರ್ಷದ ಸುದೀರ್ಘ ಕಾಮಗಾರಿಯ ಬಳಿಕ ಕೊನೆಗೂ ಕಾರ್ಯಾರಂಭದ ಭಾಗ್ಯ ಒದಗಿ ಬಂದಿದೆ. ಪಾಣೆಮಂಗಳೂರು ಹಾಗೂ ಮೆಲ್ಕಾರ್ ಪೇಟೆಯ ರಸ್ತೆ ಬದಿ ಮೀನು ಮಾರುತ್ತಿದ್ದ ವ್ಯಾಪಾರಸ್ಥರನ್ನು ಇದೀಗ ಮಾರುಕಟ್ಟೆ ಒಳಗೆ ಮಾರುವಂತೆ ಪುರಸಭೆ ಸೂಚಿಸಿದೆ. ಆದರೆ ಮೆಲ್ಕಾರ್ ಪರಿಸರದ ಮೀನು ಮಾರಾಟಗಾರರು ಮಾತ್ರ ಇನ್ನೂ ಪಾಣೆಮಂಗಳೂರು ಮೀನು ಮಾರುಕಟ್ಟೆ ಪ್ರವೇಶಿಸದೆ ಮೆಲ್ಕಾರ್ ಹೆದ್ದಾರಿ ಬದಿಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪಾಣೆಮಂಗಳೂರು ಮೀನು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಣೆಮಂಗಳೂರು ಪೇಟೆಯ ಮಾರುಕಟ್ಟೆ ಒಳಭಾಗಕ್ಕೆ ಜನ ಬಾರದೆ ಮೆಲ್ಕಾರ್ ರಸ್ತೆ ಬದಿಯಿಂದಲೇ ಮೀನು ಖರೀದಿಸಿ ತೆರಳುತ್ತಾರೆ ಎಂಬುದು ಮಾರಾಟಗಾರರ ಆರೋಪ. ಅಲ್ಲದೆ ಇಲ್ಲಿನ ಮೀನು ಮಾರುಕಟ್ಟೆ ಮೇಲ್ನೋಟಕ್ಕೆ ಸುಸಜ್ಜಿತ ಎಂದು ಕಂಡು ಬಂದರೂ ಒಳಗೆ ಬಹಳಷ್ಟು ಸಮಸ್ಯೆಗಳು ತಾಂಡವವಾಡುತ್ತಿದೆ. ಮಾರುಕಟ್ಟೆಯ ಮೇಲ್ಭಾಗದಲ್ಲಿರುವ ಟ್ಯಾಂಕಿಗೆ ನೀರು ತುಂಬಿದಾಗ ನೀರು ಮಾರುಕಟ್ಟೆ ಒಳಗೆ ಎಲ್ಲೆಂದರಲ್ಲಿ ಹರಿದಾಡುತ್ತಿದೆ. ಮೀನಿನ ತ್ಯಾಜ್ಯ ನೀರು ಹರಿಯಲೂ ಕೂಡಾ ಸಮರ್ಪಕ ವ್ಯವಸ್ಥೆ ಇಲ್ಲದೆ ಇರುವುದರಿಂದ ಅದೂ ಕೂಡಾ ಗ್ರಾಹಕರ ಕಾಲಡಿಯಲ್ಲೇ ನಿಲ್ಲುತ್ತಿರುವ ದೃಶ್ಯಗಳೂ ಕಂಡುಬರುತ್ತಿದೆ.
ವ್ಯಾಪಾರಿಗಳು ಮೀನು ಸಂಗ್ರಹಿಸಿಡುವ ಟೇಬಲ್‌ನ ಮುಂಭಾಗ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದೆ ಇರುವುದರಿಂದ ಮೀನು ರಾಶಿ ಹಾಕುವಾಗ ಕೆಳಗೆ ಬಿದ್ದು ನೀರು ಹರಿಯುವ ಚರಂಡಿಗೆ ಬೀಳುವ ಸಮಸ್ಯೆಯೂ ಇದೆ. ಮೆಲ್ಕಾರ್ ಪರಿಸರದಲ್ಲಿ ರಸ್ತೆ ಬದಿ ಮೀನು ಮಾರಾಟ ಮಾಡುವವರನ್ನು ಮಾರುಕಟ್ಟೆ ಒಳಗೆ ಕರೆಸದಿದ್ದಲ್ಲಿ ನಾವು ಕೂಡಾ ಪಾಣೆಮಂಗಳೂರು ಪೇಟೆಯ ರಸ್ತೆ ಬದಿಯಲ್ಲೇ ಮಾರಾಟ ಮಾಡುವುದಾಗಿ ಪಾಣೆಮಂಗಳೂರು ಮೀನು ಮಾರಾಟಗಾರರು ಎಚ್ಚರಿಸಿದ್ದಾರೆ. ಈ ಬಗ್ಗೆ ಪುರಸಭೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.