ಹಬ್ಬದ ಜಿಲ್ಲೆಯಲ್ಲಿ ಸಾಮರಸ್ಯದ ಕೊರತೆ: ಸಚಿವ ರೈ ಬೇಸರ
ಬಂಟ್ವಾಳ, ಅ.11: ವರ್ಷ ಪೂರ್ತಿ ಒಂದಿಲ್ಲೊಂದು ಜಾತಿ, ಧರ್ಮಗಳ ಹಬ್ಬ ಹರಿದಿನಗಳು ನಡೆಯುವ ಕರಾವಳಿ ಜಿಲ್ಲೆಗಳು ಹಬ್ಬದ ಜಿಲ್ಲೆಗಳಾಗಿವೆ. ಆದರೆ ಇಲ್ಲಿ ಮನುಷ್ಯ ಮನುಷ್ಯರ ನಡುವೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಬಂಟ್ವಾಳ ಬೈಪಾಸ್‌ನಲ್ಲಿರುವ ಲೆವಿನ್ ಸಮೂಹ ಸಂಸ್ಥೆಗಳ ಕಚೇರಿಯಲ್ಲಿ ವಿಶಿಷ್ಟವಾಗಿ ನಡೆದ ಆಯುಧ ಪೂಜಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಗೋವು, ಧರ್ಮ, ಭಾಷೆ, ದೇಶ ಪ್ರೇಮದ ಹೆಸರಿನಲ್ಲಿ ಮನುಷ್ಯ ಮನುಷ್ಯನನ್ನೇ ಕೊಲ್ಲುತ್ತಿದ್ದಾನೆ. ಮತಾಂತರದ ಸುಳ್ಳು ಪ್ರಚಾರ ಮಾಡಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿ ಮನುಷ್ಯರ ನಡುವೆ ಅಂತರ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಬಹಳ ವರ್ಷಗಳ ಹಿಂದೆ ಅಸಮಾನತೆಯ ಕಾರಣದಿಂದ ಹಾಗೂ ಆಮಿಷಕ್ಕೆ, ಬಲವಂತದ ಮತಾಂತರ ನಡೆಯುತ್ತಿದ್ದವು. ಆದರೆ ವರ್ತಮಾನದಲ್ಲಿ ಜನರು ಪ್ರಜ್ಞಾವಂತರಾಗಿದ್ದು ಮತಾಂತರದಂತಹ ಯಾವುದೇ ಕಾರ್ಯ ನಡೆಯುತ್ತಿಲ್ಲ ಎಂದು ಅವರು ಹೇಳಿದರು.
ಸಮಾಜದಲ್ಲಿ ಕೋಮು ದ್ವೇಷ, ಅಶಾಂತಿಯ ವಾತಾವರಣ ಸೃಷ್ಟಿಯಾದಾಗ ಬಡವರು, ಅಮಾಯಕರು, ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕೋಮುವಾದ ಮತ್ತು ಮತೀಯವಾದಿಗಳ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದೆ ಜನರು ಮನುಷ್ಯತ್ವವನ್ನು ಮೈಗೂಡಿಸಿ ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಬಾಳಬೇಕಾಗಿದೆ ಎಂದು ಅವರು ಕರೆ ನೀಡಿದರು.
ಸಾರ್ವಜನಿಕರ ಉತ್ತಮ ಸೇವೆಗೆ ಹೆಸರಾಗಿರುವ ಲೆವಿನ್ ಸಮೂಹ ಸಂಸ್ಥೆಯು ತನ್ನ ಕಾರ್ಮಿಕರಿಗೆ ಅನುಕೂಲವಾಗುವಂತೆ ಕ್ರೀಡೋತ್ಸವ, ಕಣ್ಣು ತಪಾಸಣೆ ಶಿಬಿರಗಳನ್ನು ಹಮ್ಮಿಕೊಂಡು ಅಗತ್ಯ ಚಿಕಿತ್ಸೆಗಳನ್ನು ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ನಡೆಸುತ್ತಾ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಶಾಘ್ಲಿಸಿದರು.
ಅಗ್ರಾರ್ ಚರ್ಚ್‌ನ ಧರ್ಮಗುರು ಲಿಗೋರಿ ಡಿಸೋಜ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಬಳಿಕ ಧರ್ಮಗುರು ಎಲ್ಲ ಹೂವಿನಿಂದ ಆಲಂಕೃತವಾದ ವಾಹನಗಳು ಹಾಗೂ ಯಂತ್ರೋಪಕರಣಗಳಿಗೆ ತೀರ್ಥ ಪ್ರೋಕ್ಷಣೆ ಮಾಡುವುದರೊಂದಿಗೆ ಪೂಜಾ ವಿಧಿವಿಧಾನ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಲೆವಿನ್ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿದರು. ಬಳಿಕ ಎಲ್ಲ ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಕುಟುಂಬಗಳಿಗಾಗಿ ಮಂಗಳೂರಿನ ಪ್ರಸಾದ್ ನೇತ್ರಾಲಯದ ವೈದ್ಯರ ತಂಡ ಉಚಿತ ಕಣ್ಣು ಚಿಕಿತ್ಸಾ ಶಿಬಿರವನ್ನು ನಡೆಸಿಕೊಟ್ಟರು.
ಮೊನಿಕ ರೋಡ್ರಿಗಸ್, ರಾಜೇಶ್ ರೋಡ್ರಿಗಸ್, ವರದರಾಜ್, ಪ್ರಸಾದ್ ಆಸ್ಪತ್ರೆಯ ಡಾ. ಸವಿತಾ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಪಿಯೂಸ್ ರೋಡ್ರಿಗಸ್ ಸ್ವಾಗತಿಸಿದರು. ರಾಜೇಶ್ ಕಕ್ಯೆಪದವು ಕಾರ್ಯಕ್ರಮ ನಿರೂಪಿಸಿದರು.