ಬ್ಯಾರಿ ಭಾಷಾಭಿವೃದ್ಧಿಗೆ ಬಂಟ್ವಾಳದ ಕೊಡುಗೆ ಅನನ್ಯ: ರಾಮಾಕೃಷ್ಣ ಆಳ್ವ
ಬಂಟ್ವಾಳ, ಅ. 11: ಬ್ಯಾರಿ ಭಾಷೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ಜನತೆಯ ಕೊಡುಗೆ ಅನನ್ಯವಾದುದು ಎಂದು ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮತ್ತು ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇವುಗಳ ಆಶ್ರಯದಲ್ಲಿ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾರಿ ಎಂದಾಕ್ಷಣ ಕೀಳರಿಮೆ ಹೊಂದಿದ್ದ ಜನತೆ ಇದೀಗ ಬ್ಯಾರಿ ಎಂದಾಕ್ಷಣ ಹೆಮ್ಮೆಯಿಂದ ಬೀಗುವಂತಾಗಿದೆ ಎಂದರು.
ಬ್ಯಾರಿ ಭಾಷೆಯಲ್ಲಿ ಪ್ರಥಮವಾಗಿ ಬಂಟ್ವಾಳದಲ್ಲಿ ಹಾಡಲು ಆರಂಭಿಸಿದ ರಹೀಂ ಬಿ.ಸಿ.ರೋಡು ಅವರನ್ನು ಸ್ಮರಿಸಿದ ರಾಮಕೃಷ್ಣ ಆಳ್ವ ಹಲವಾರು ಬ್ಯಾರಿ ಭಾಷಾ ಚಟುವಟಿಕೆಗಳು, ಸಮ್ಮೇಳನಗಳು, ಆಂದೋಲನಗಳು ಕೂಡಾ ಬಂಟ್ವಾಳದಲ್ಲೇ ಆರಂಭಗೊಂಡಿದೆ. ಬಂಟ್ವಾಳ ತಾಲೂಕಿನವರ ಅಪಾರ ಶ್ರಮದ ಫಲವಾಗಿಯೇ ಬ್ಯಾರಿ ಭಾಷೆಗೆ ಸರಕಾರದಿಂದ ಅಕಾಡಮಿ ದೊರೆತಿದೆ ಎಂದವರು ಅಭಿಪ್ರಾಯಪಟ್ಟರು.
ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ, ಬಂಟ್ವಾಳ ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಡಿಸಿಸಿ ಉಪಾಧ್ಯಕ್ಷ ಬಿ.ಎಚ್.ಖಾದರ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯ ಡಿ.ಎಂ.ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಶ್ರಫ್ ಅಪೋಲೋ ಕಲ್ಲಡ್ಕ, ರಶೀದ್ ನಂದಾವರ ಬ್ಯಾರಿ ಹಾಡುಗಳನ್ನು ಹಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯರಾದ ಹಮೀದ್ ಗೋಳ್ತಮಜಲು ಸ್ವಾಗತಿಸಿ, ಮುಹಮ್ಮದ್ ಝಕರಿಯಾ ಕಲ್ಲಡ್ಕ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.