ಮೀಸಲಾತಿ ವ್ಯವಸ್ಥೆಯಿಂದ ರಾಷ್ಟ್ರಕ್ಕೆ ಬೆದರಿಕೆ: ಹಜಾರೆ
ಸಿಕಾರ್(ರಾಜಸ್ಥಾನ), ಅ.11: ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದಾಗಿ ಮೀಸಲಾತಿ ವ್ಯವಸ್ಥೆಯು ರಾಷ್ಟ್ರಕ್ಕೆ ಬೆದರಿಕೆಯನ್ನೊಡ್ಡುತ್ತಿದೆಯೆಂದು ಸಮಾಜ ಕಾರ್ಯಕರ್ತ ಅಣ್ಣಾ ಹಜಾರೆ ಇಂದು ಹೇಳಿದ್ದಾರೆ.
ದೇಶವು ಮೀಸಲಾತಿ ವ್ಯವಸ್ಥೆಯ ಬೆದರಿಕೆಗೊಳಗಾಗಿದೆ. ಸ್ವಾತಂತ್ರ ನಂತರ ಕೆಲವು ಸಮಯದ ವರೆಗೆ ಮಾತ್ರ ಮೀಸಲಾತಿ ಅಗತ್ಯವಿತ್ತು. ಆದರೆ, ಈಗ ಅದರಲ್ಲಿ ರಾಜಕೀಯ ಪಕ್ಷಗಳು ಒಳಗೊಂಡಿವೆಯೆಂದು ಅವರು ಸಿಕಾರ್‌ನಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಚುನಾವಣಾ ಸುಧಾರಣೆಯ ಅಂಗೌಆಗಿ ಮತಪತ್ರ ಹಾಗೂ ಮತಯಂತ್ರಗಳಲ್ಲಿ ಚುನಾವಣಾ ಚಿಹ್ನೆಗಳನ್ನು ಮುದ್ರಿಸಬಾರದು. ಇದು ಸಾಂವಿಧಾನಿಕ ವ್ಯವಸ್ಥೆಯಲ್ಲ. ಚಿಹ್ನೆಗಳನ್ನು ತೆಗೆದು ಹಾಕುವಂತೆ ತಾನು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿದ್ದೇನೆ. ಈ ವಿಷಯವನ್ನು ತಾನು ಸಿಖಾರ್‌ನಿಂದಲೇ ಆರಂಭಿಸುತ್ತೇನೆಂದು ಹಜಾರೆ ಹೇಳಿದರು.
ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡೂ ಭ್ರಷ್ಟಾಚಾರದಲ್ಲಿ ತೊಡಗಿವೆಯೆಂದು ಆರೋಪಿಸಿದ ಅವರು, ಈ ಪಕ್ಷಗಳಿಂದ ಭ್ರಷ್ಟಾಚಾರ ನಿರ್ಮೂಲನ ಸಾಧ್ಯವಿಲ್ಲ. ಅದರ ಕೀಲಿಕೈ ಮತದಾರರಲ್ಲಿದೆ ಎಂದರು.
ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ಭ್ರಷ್ಟಾಚಾರದ ವಿಷಯವನ್ನು ಎತ್ತಿಕೊಂಡಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಅದರ ನಿರ್ಮೂಲನಕ್ಕೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದ ಹಜಾರೆ, ಶೇ.50ರಷ್ಟು ಭ್ರಷ್ಟಾಚಾರವನ್ನು ಕೇವಲ ಲೋಕಪಾಲ ಮಸೂದೆಯಿಂದಷ್ಟೇ ನಿಯಂತ್ರಿಸಬಹುದೆಂದು ಒತ್ತಿ ಹೇಳಿದರು.
ಗೋಮಾಂಸದ ವಿಚಾರದಲ್ಲೂ ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಗಾಂಧಿವಾದಿ, ಅದನ್ನೀಗ ಯಾಕೆ ಎತ್ತಲಾಗುತ್ತಿದೆಯೆಂದು ಪ್ರಶ್ನಿಸಿದರು.
ಕಳೆದ 68 ವರ್ಷಗಳಿಂದ ಅವರು ಗೋಮಾಂಸವನ್ನು ಕಂಡಿಲ್ಲವೇ? ಇದೆಲ್ಲ ಕೇವಲ ರಾಜಕೀಯಕ್ಕಾಗಿ ಎಂದು ಅವರು ಹೇಳಿದರು.