×
Ad

ಬಹುಕೋಟಿ ವಂಚನೆ ಪ್ರಕರಣ: ಧೋನಿ ಪತ್ನಿ ಸಾಕ್ಷಿ ವಿರುದ್ಧ ಎಫ್‌ಐಆರ್

Update: 2016-10-11 19:53 IST

ಹೊಸದಿಲ್ಲಿ, ಅ.11: ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಹಾಗೂ ರಿತಿ ಎಂಎಸ್‌ಡಿ ಅಲ್ಮೊಡ್ ಕಂಪನಿಯ ಇತರ ನಾಲ್ವರು ನಿರ್ದೇಶಕರ ವಿರುದ್ಧ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

  

ರಿತಿ ಎಂಎಸ್‌ಡಿ ಅಲ್ಮೊಡ್ ಕಂಪನಿಯ ಸಾಕ್ಷಿ ಹಾಗೂ ಇತರ ನಾಲ್ವರು ನಿರ್ದೇಶಕರು ಸ್ಪೋರ್ಟ್ಸ್ ಫಿಟ್‌ನೆಸ್ ಕಂಪೆನಿ ಸ್ಪೋರ್ಟ್ಸ್‌ಫಿಟ್ ವರ್ಲ್ಡ್ ಪ್ರೈ.ಲಿ.ನಲ್ಲಿ ಶೇರು ಹೊಂದಿದ್ದರು. ಡೆನ್ನಿಸ್ ಅರೋರ ಎಂಬುವವರು ಈ ಕಂಪೆನಿಯಲ್ಲಿ 39 ಶೇ. ಶೇರು ಹೊಂದಿದ್ದರು. ಆ ನಂತರ ಅರೋರ ಈ ಶೇರನ್ನು ರಿಟಿ ಎಂಎಸ್‌ಡಿ ಅಲ್ಮೋಡ್ ನಿರ್ದೇಶಕರಿಗೆ ಮಾರಾಟ ಮಾಡಿದ್ದರು. ಶೇರು ವರ್ಗಾವಣೆಗೊಂಡ ನಂತರ ಎರಡೂ ಪಾರ್ಟಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದರು.

ಒಪ್ಪಂದದನ್ವಯ ಈ ವರ್ಷದ ಮಾರ್ಚ್ 31 ರಂದು ರಿಟಿ ಎಂಎಸ್‌ಡಿ ಅಲ್ಮೋಡ್ ಕಂಪೆನಿ ಅರೋರಾಗೆ 11 ಕೋಟಿ ರೂ. ಪಾವತಿಸಬೇಕಾಗಿತ್ತು. ಆದರೆ, 8.75 ಕೋಟಿ ರೂ. ಬಾಕಿ ಇರಿಸಲಾಗಿದೆ ಎಂದು ಆರೋರ ಆರೋಪಿಸಿದ್ದಾರೆ.

ತನಗೆ ಸೇರಬೇಕಾದ ಸಂಪೂರ್ಣ ಹಣವನ್ನು ಅಲ್ಮೋಡ್ ಕಂಪೆನಿ ಪಾವತಿಸಿಲ್ಲ ಎಂದು ಆರೋಪಿಸಿ ಅರೋರ ಗುರ್ಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾನು ಎಲ್ಲ ಷೇರುಗಳನ್ನು ವರ್ಗಾವಣೆ ಮಾಡಿದ ಹೊರತಾಗಿಯೂ ಕೇವಲ 2.25 ಕೋಟಿ ರೂ. ಮಾತ್ರ ಪಾವತಿಸಲಾಗಿದೆ ಎಂದು ಅರೋರ ದೂರಿನಲ್ಲಿ ತಿಳಿಸಿದ್ದಾರೆ.

‘‘ ಅರೋರರಿಂದ ಷೇರು ಸ್ವೀಕರಿಸಿದ ಆಧಾರದಲ್ಲಿ ಮೊತ್ತವನ್ನು ನೀಡಿದ್ದೇವೆ. ಸಾಕ್ಷಿ ಧೋನಿ ರಿಟಿ ಎಂಎಸ್‌ಡಿ ಅಲ್ಮೋಡ್‌ನ ಪಾಲುದಾರರಲ್ಲ. ಅವರು ಕಳೆದ ವರ್ಷವೇ ಕಂಪೆನಿ ತೊರೆದಿದ್ದರು. ಸಾಕ್ಷಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದರಲ್ಲಿ ಯಾವುದೇ ಹುರುಳಿಲ್ಲ’’ ಎಂದು ರಿಟಿ ಎಂಎಸ್‌ಡಿ ಅಲ್ಮೋಡ್‌ನ ನಿರ್ದೇಶಕರ ಪೈಕಿ ಓರ್ವರಾಗಿರುವ ಅರುಣ್ ಪಾಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News