ಆಡಳಿತ ವರ್ಗದ ನಿರ್ಲಕ್ಷಕ್ಕೆ ಈ ಕೊರಗ ಕುಟುಂಬ ಸಾಕ್ಷಿ
ಕಾಸರಗೋಡು,ಅ.11 : ಆಡಳಿತ ವರ್ಗದ ನಿರ್ಲಕ್ಷಕ್ಕೆ ಪೆರ್ಲ ವಾಣಿನಗರದ ಬಡ ದಲಿತ ಕುಟುಂಬವೊಂದು ಸಾಕ್ಷಿ ಎನ್ನಬಹುದು.
ಕೊರಗ ಸಮುದಾಯದ ದಂಪತಿ ವಾಸಿಸುತ್ತಿ ರುವುದು ಜೋಪಡಿಯೊಂದರಲ್ಲಿ. ಎಣ್ಮಕಜೆ ಗ್ರಾಮ ಪಂಚಾಯತ್ ನ ಸ್ವರ್ಗ - ಎಣ್ಮಕಜೆ ರಸ್ತೆಯ ದೇಲ೦ತಾರು ಎಂಬಲ್ಲಿ ಕೂಲಿ ಕಾರ್ಮಿಕ ರಾಮ ( 52) ಮತ್ತು ಪತ್ನಿ ಸುಂದರಿ ( 37) ನರಕ ಜೀವನ ವನ್ನು ಸವೆಸುತ್ತಿದ್ದಾರೆ.
ಗಾಳಿ , ಮಳೆಗೆ ಯಾವುದೇ ಸಂದರ್ಭದಲ್ಲಿ ನೆಲಕಚ್ಚುವ ಭೀತಿಯಲ್ಲಿದೆ ಈ ಜೋಪಡಿ.
ಮೂರು ವರ್ಷದ ಹಿಂದೆ ಸಣ್ಣ ಗುಡಿಸಲು ಕಟ್ಟಿ ಜೀವನ ಆರಂಭಿಸಿದ ಈ ದಂಪತಿ ಮನೆ ಗಾಗಿ ಅಲೆದಾಡಿ ಸುಸ್ತಾಗಿದೆ.
ಸರಕಾರದ ಇಲಾಖೆ , ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಮನೆ ನಿರ್ಮಾಣಕ್ಕೆ ಅನುದಾನ ಒಂದು ವರ್ಷದ ಹಿಂದೆಯೇ ಮಂಜೂರಾಗಿದೆ ಎಂಬ ಭರವಸೆ ಲಭಿಸಿದೆ ಆದರೂ ಇನ್ನೂ ಕೈ ಸೇರಿಲ್ಲ.
ಈಗ ಇರುವ ಗುಡಿಸಲಿನಲ್ಲಿ ಅಡುಗೆ ಸೇರಿದಂತೆ ಎಲ್ಲಾ ವ್ಯವಸ್ಥೆ ಆಗಬೇಕಿದೆ. ಸಮೀಪ ಕಾಡು ಬೆಳೆದಿದೆ ಹಂದಿ ಸಹಿತ ಕಾಡು ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇಲ್ಲದಿಲ್ಲ.
ಸರಕಾರದ ಪರಿಶಿಷ್ಟ ಇಲಾಖೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಇಂತಹ ಕುಟುಂಬಗಳ ಬಗ್ಗೆ ಕಣ್ಣೆತ್ತಿ ನೋಡುತ್ತಿಲ್ಲ ಎಂಬುದು ಇದುವೇ ನಿದರ್ಶನ .
ವರ್ಷಗಳಿಂದ ಮಳೆ , ಗಾಳಿ , ಬಿಸಿಲು ಎಂಬಂತೆ ಈ ಗುಡಿಸಲಿನಲ್ಲಿ ಜೀವನ ಸವೆಸುತ್ತಿರುವ ಕುಟುಂಬದ ಕಾಳಜಿ ಇಲ್ಲದಂತಾಗಿದೆ. ಗ್ರಾಮ ಪಂಚಾಯತ್ ನಿಂದ ಹಿಡಿದು ಸರಕಾರಿ ಇಲಾಖೆ ಈ ಕುಟುಂಬದ ಸ್ಥಿತಿ ಬಗ್ಗೆ ಕಣ್ಣು ತೆರೆಯಬೇಕಿದೆ.