ಉಡುಪಿ: ಜೂನಿಯರ್, ಮಾಸ್ಟರ್ಸ್ ಅಥ್ಲೆಟಿಕ್ ಸ್ಪರ್ಧೆ
ಉಡುಪಿ, ಅ.11: ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಉಡುಪಿ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‌ನ ಜಂಟಿ ಆಶ್ರಯದಲ್ಲಿ ಜೂನಿಯರ್ ಹಾಗೂ ಹಿರಿಯರ ಕ್ರೀಡಾಕೂಟ ಅ.23ರಂದು ಉಡುಪಿಯ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಮಣಿಪಾಲ ಟೌನ್‌ನ ಅಧ್ಯಕ್ಷ ಸಚ್ಚಿದಾನಂದ ವಿ.ನಾಯಕ್ ತಿಳಿಸಿದ್ದಾರೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಯಾವುದೇ ಕ್ರೀಡಾಕೂಟದಲ್ಲಿ ಈವರೆಗೆ ಯಾವುದೇ ಪದಕ ಜಯಿಸದ 12ರಿಂದ 16 ವರ್ಷದೊಳಗಿನ ಬಾಲಕ-ಬಾಲಕಿಯರು (ನಾನ್ ಮೆಡಲಿಸ್ಟ್) ಹಾಗೂ 35 ವರ್ಷ ಮೇಲ್ಪಟ್ಟ ಹಿರಿಯ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸ ಬಹುದು ಎಂದವರು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಕುರಿತು ಆಸಕ್ತಿ ಮೂಡಿಸುವುದು ಹಾಗೂ ಹಾಗೂ ಆಸಕ್ತರನ್ನು ಪ್ರೋತ್ಸಾಹಿಸುವುದು ಈ ಕ್ರೀಡಾಕೂಟ ಆಯೋಜನೆ ಹಿಂದಿರುವ ಸದಾಶಯವಾಗಿದೆ ಎಂದು ಸಚ್ಚಿದಾನಂದ ನಾಯಕ್ ನುಡಿದರು. ಕ್ರೀಡಾಕೂಟದಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದರು.
ಜೂನಿಯರ್ ವಿಭಾಗದಲ್ಲಿ 12 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ, 14 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಹಾಗೂ 16 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಅದೇ ರೀತಿ ಮಾಸ್ಟರ್ಸ್ ವಿಭಾಗದಲ್ಲಿ 35 ವರ್ಷ ಮೇಲ್ಪಟ್ಟು, 40, 45, 50, 55, 60, 65, 70, 75, 80 ಹಾಗೂ 85 ವರ್ಷ ಮೇಲ್ಪಟ್ಟ ವಯೋಮಾನ ದವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ ಎಂದು ಕ್ರೀಡಾಕೂಟದ ಸಂಯೋಜಕ ಹಾಗೂ ಮಣಿಪಾಲ ವಿವಿಯ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆಂಪರಾಜ್ ತಿಳಿಸಿದರು.
ಸ್ಪರ್ಧೆಗಳು ಅ.23ರ ರವಿವಾರ ಬೆಳಗ್ಗೆ 8:00ರಿಂದ ಸಂಜೆ 5:00ಗಂಟೆ ಯವರೆಗೆ ಅಜ್ಜರಕಾಡಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಸಕ್ತರು ತಮ್ಮ ಹೆಸರುಗಳನ್ನು ಅ.15ರೊಳಗೆ ಡಾ.ಕೆಂಪರಾಜ್ (ಮೊಬೈಲ್: 9448382187) ಹಾಗೂ ಉದಯಕುಮಾರ್ ಶೆಟ್ಟಿ (7353180888) ಇವರಲ್ಲಿ ನೊಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಜೂನಿಯರ್ ವಿಭಾಗದಲ್ಲಿ ಸುಮಾರು 300 ಹಾಗೂ ಹಿರಿಯರ ವಿಭಾಗದಲ್ಲಿ 400 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಹ ಸಂಯೋಜಕ ಡಾ.ಶೇಷಪ್ಪ ರೈ, ಶ್ರೀಕಾಂತ ಉಪಾಧ್ಯ ಉಪಸ್ಥಿತರಿದ್ದರು.