×
Ad

ಡೀಲರ್ ಮಾರ್ಜಿನ್ ಪರಿಷ್ಕರಣೆಗೆ ಆಗ್ರಹ: ‘ಪೆಟ್ರೋಲಿಯಂ ಡೀಲರ್ಸ್ ಮಹಾಮಂಡಲದಿಂದ ಧರಣಿ’

Update: 2016-10-11 23:45 IST

ಮಂಗಳೂರು, ಅ.11: ಡೀಲರ್ ಮಾರ್ಜಿನ್ ಪರಿಷ್ಕರಣೆಗೆ ಆಗ್ರಹಿಸಿ ಅಖಿಲ ಭಾರತ ಪೆಟ್ರೋಲಿಯಂ ಡೀಲರ್ಸ್‌ ಅಸೋಸಿಯೇಶನ್ ನೀಡಿದ ಕರೆಯಂತೆ ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್ಸ್‌ ಮಹಾಮಂಡಲ ಕೆಎಸ್‌ಎ್ಪಿಡಿ ಒಕ್ಕೂಟದ ಡೀಲರ್‌ಗಳಿಂದ ಮೂರು ಹಂತದ ಧರಣಿ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರ.ಕಾರ್ಯದರ್ಶಿ ಕೆ. ವಿಶ್ವನಾಥ ಶೆಣೈ, ಮೊದಲ ಹಂತವಾಗಿ ಅ.19 ಮತ್ತು 26ರಂದು ರಾತ್ರಿ 7ರಿಂದ 7:15ರವರೆಗೆ ಬ್ಲಾಕ್‌ಔಟ್ ಮತ್ತು ತೈಲ ಪೂರೈಸುವಿಕೆ ಸ್ಥಗಿತಗೊಳಿಸಿ ಗ್ರಾಹಕರಿಗೆ ಅಡಚಣೆಯಾಗದಂತೆ ಸಾಂಕೇತಿಕ ಮುಷ್ಕರ ನಡೆಯಲಿದೆ. ಎರಡನೆ ಹಂತವಾಗಿ ನ.3ರಂದು ಪೆಟ್ರೋಲಿಯಂ ಉತ್ಪನ್ನಗಳ ಖರೀದಿಯನ್ನು ಸ್ಥಗಿತಗೊಳಿಸಿ ಧರಣಿ ಹಮ್ಮಿಕೊಳ್ಳಲಾಗಿದೆ. ಆದಾಗ್ಯೂ ಡೀಲರ್‌ಗಳ ಬೇಡಿಕೆ ಈಡೇರದಿದ್ದಲ್ಲಿ ಮೂರನೆ ಹಂತದಲ್ಲಿ ನ.15ರಂದು ‘ನೋ ಸೇಲ್, ನೋ ಪರ್ಚೇಸ್’ ಮೂಲಕ ತೈಲ ಮಾರಾಟ ಮತ್ತು ಖರೀದಿ ಸ್ಥಗಿತದ ಪ್ರತಿಭಟನೆ ನಡೆಯಲಿದೆ ಎಂದರು.

ಡೀಲರ್‌ಗಳ ಕುಂದುಕೊರತೆ ಬಗ್ಗೆ ನಿಗಾವಹಿಸಲು ಭಾರತ ಸರಕಾರ ರಚಿಸಿದ ಅಪೂರ್ವ ಚಂದ್ರ ಕಮಿಟಿ ಶಿಾರಸಿನಂತೆ ತೈಲ ಕಂಪೆನಿಗಳು ಸೂತ್ರವನ್ನು ಕಾರ್ಯರೂಪಕ್ಕೆ ಅನುಷ್ಠಾನಿಸುವುದು, ಪೆಟ್ರೋಲ್‌ನಲ್ಲಿ ಎಥೆನಾಲ್‌ನ್ನು ಸಮರ್ಪಕವಾಗಿ ಮಿಶ್ರಣ ಮಾಡಿ ಪೂರೈಸುವ ಮೂಲಕ ಗ್ರಾಹಕರ ಮೋಟಾರ್‌ಗಳಿಗೆ ಆಗುವ ಹಾನಿಯನ್ನು ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ದ.ಕ. ಮತ್ತು ಉಡುಪಿ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ ಆನಂದ ಕಾರ್ನಾಡ್ ಪ್ರಮುಖರಾದ ಸತೀಶ್ ಕಾಮತ್, ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News