ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಹೋಟೆಲ್ ಮ್ಯಾನೇಜರ್‌ಗೆ ಬೆದರಿಕೆ
ಉಡುಪಿ, ಅ.12: ಇತ್ತೀಚೆಗೆ ತನ್ನ ಹೆಂಡತಿ ಮತ್ತು ಮಗನ ಕೈಯಿಂದ ಹತ್ಯೆಗೀಡಾದ ಉದ್ಯಮಿ ಭಾಸ್ಕರ ಶೆಟ್ಟಿ ಅವರ ದುರ್ಗಾ ಇಂಟರ್‌ನ್ಯಾಷನಲ್ ಹೊಟೇಲ್‌ನ ಮ್ಯಾನೇಜರ್‌ಗೆ ಕೊಲೆ ಬೆದರಿಕೆಯನ್ನು ಹಾಕಲಾಗಿದೆ ಎಂದು ಹೊಟೇಲ್‌ನ ಮ್ಯಾನೇಜರ್ ಬಾಲಕೃಷ್ಣ ಆಳ್ವ ಎಂಬವರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಭಾಸ್ಕರ ಶೆಟ್ಟಿ ಅವರ ಕೊಲೆಯಾದ ಬಳಿಕ ಅವರ ತಾಯಿ ಗುಲಾಬಿ ಶೆಟ್ಟಿ ಅವರು ಹೊಟೇಲ್‌ನ್ನು ನಡೆಸಲು ಸಂದೇಶ್ ಶೆಟ್ಟಿ ಎಂಬವರಿಗೆ ನೀಡಿದ್ದರು. ಬಾಲಕೃಷ್ಣ ಆಳ್ವ ಅವರು ಹೊಟೇಲ್‌ನ ಮ್ಯಾನೇಜರ್ ಆಗಿ ಮುಂದುವರಿದಿದ್ದರು.
ಕಳೆದ ಆ.8ರಂದು ಬಾಲಕೃಷ್ಣ ಆಳ್ವ ಅವರು ಹೋಟೆಲ್‌ನಲ್ಲಿರುವಾಗ, ಭಾಸ್ಕರ ಶೆಟ್ಟಿ ಅವರ ಪತ್ನಿ, ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಅವರ ಸಹೋದರಿ ರೂಪಾ ಡಿ. ಶೆಟ್ಟಿ ಅವರು ರೇಣುಕಾ ರೈ ಸೇರಿದಂತೆ ನಾಲ್ವರೊಂದಿಗೆ ಹೊಟೇಲಿಗೆ ಬಂದು ಬಾಲಕೃಷ್ಣ ಶೆಟ್ಟಿ ಹಾಗೂ ಸಂದೇಶ ಶೆಟ್ಟಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೇ ಅ.8ರ ಶನಿವಾರ ಬೆಳಗ್ಗೆ 10:00 ಗಂಟೆಗೆ ಮತ್ತೆ ಹೊಟೇಲಿಗೆ ಅಕ್ರಮ ಪ್ರವೇಶ ಮಾಡಿ ಬಾಲಕೃಷ್ಣ ಆಳ್ವ ಮತ್ತು ಸಂದೇಶ ಶೆಟ್ಟಿ ಅವರಿಗೆ ಮತ್ತೆ ಕೊಲೆ ಬೆದರಿಕೆ ಹಾಕಿ ಹೋಗಿರುವುದಾಗಿ ಬಾಲಕೃಷ್ಣ ಶೆಟ್ಟಿ ಅವರು ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಪೊಲೀಸ್ ಇದೀಗ ರೂಪಾ ಡಿ.ಶೆಟ್ಟಿ, ರೇಣುಕಾ ರೈ ಮತ್ತು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.