ಉಡುಪಿ: ಅ.17ಕ್ಕೆ ಸ್ವಚ್ಛ ನಗರ ಮ್ಯಾರಥಾನ್
ಉಡುಪಿ, ಅ.12: ದೇಶದ 7ನೆ ಸ್ವಚ್ಛ ನಗರವಾಗಿ ಮಾನ್ಯತೆ ಪಡೆದಿರುವ ಉಡುಪಿ ನಗರವನ್ನು ದೇಶದ ಅಗ್ರಮಾನ್ಯ ಸ್ವಚ್ಛ ನಗರವನ್ನಾಗಿಸಲು ಜನಜಾಗೃತಿ ಮೂಡಿಸಲು ಅ.17ರ ಸೋಮವಾರ ನಗರದಲ್ಲಿ ‘ಸ್ವಚ್ಛ ನಗರ, ಸುಂದರ ನಗರ ಮ್ಯಾರಥಾನ್’ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಐ ಮಣಿಪಾಲ ಹಿಲ್‌ಸಿಟಿಯ ವಲಯ ನಿರ್ದೇಶಕ ರತ್ನಾಕರ ಇಂದ್ರಾಳಿ ತಿಳಿಸಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇಸಿ ಸಪ್ತಾಹದ ಅಂಗವಾಗಿ ಜೆಸಿಐ ಮಣಿಪಾಲ ಹಿಲ್ ಸಿಟಿ, ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಲಯನ್ಸ್ ಕ್ಲಬ್ ಉಡುಪಿ- ಇಂದ್ರಾಳಿ, ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳ ಸಂಯುಕ್ತ ಆಶ್ರಯದಲ್ಲಿ ಈ ಮ್ಯಾರಥಾನ್‌ನ್ನು ಆಯೋಜಿಸಲಾಗಿದೆ ಎಂದರು.
ಒಟ್ಟು 4.5 ಕಿ.ಮೀ. ದೂರದ ಈ ಮ್ಯಾರಥಾನ್ ಸ್ಪರ್ಧೆಗೆ ಬೆಳಗ್ಗೆ 7ಗಂಟೆಗೆ ಉಡುಪಿ ಜೋಡುಕಟ್ಟೆಯಲ್ಲಿ ಚಾಲನೆ ನೀಡಲಾಗುತ್ತದೆ. ಇಂದ್ರಾಳಿಯ ಶ್ರೀಕೃಷ್ಣ ಪೆಟ್ರೋಲಿಯಂ ಬಳಿ ಸ್ಪರ್ಧೆ ಮುಕ್ತಾಯಗೊಳ್ಳಲಿದೆ. ಬಳಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮ್ಯಾರಥಾನ್‌ಗೆ ಚಾಲನೆ ನೀಡಿ ಬಹುಮಾನ ವಿತರಣೆ ಮಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಲಯನ್ಸ್ ಕ್ಲಬ್‌ನ ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ, ವೆಸ್ಟರ್ನ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ವಾಲ್ಟರ್ ಸ್ಟೀಫನ್ ಮೆಂಡಿಸ್, ಜೇಸಿ ವಲಯಾಧ್ಯಕ್ಷ ಸಂದೀಪ್ ಕುಮಾರ್ ಉಪಸ್ಥಿತರಿರುವರು ಎಂದರು.
ವಿಜೇತರಿಗೆ ಪ್ರಥಮ ಬಹುಮಾನ 10,000ರೂ., ದ್ವಿತೀಯ ಬಹುಮಾನ 5,000 ರೂ. ಹಾಗೂ ತೃತೀಯ 3,000 ರೂ.ಗಳೊಂದಿಗೆ ಟ್ರೋಫಿ ನೀಡಲಾಗುವುದು. ಇದರೊಂದಿಗೆ ಅತಿ ಕಿರಿಯ ಸ್ಪರ್ಧಾಳು ಹಾಗೂ ಅತಿ ಹಿರಿಯ ಸ್ಪರ್ಧಾಳುಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದವರು ತಿಳಿಸಿದರು.
ಈ ಕುರಿತ ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ: 0820- 2528726, 9686695206ನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಸುದ್ದಿಗೋಷ್ಠಿಯಲ್ಲಿ ಜೆಸಿಐ ಮಣಿಪಾಲ ಹಿಲ್ ಸಿಟಿ ಅಧ್ಯಕ್ಷ ಜಗದೀಶ್ ಆಚಾರ್ಯ, ಲಯನ್ಸ್ ಕ್ಲಬ್ ಉಡುಪಿ-ಇಂದ್ರಾಳಿ ಅಧ್ಯಕ್ಷ ಮಹಮ್ಮದ್ ವೌಲಾ, ವೆಸ್ಟನ್ ಇನ್‌ಸ್ಟಿಟ್ಯೂಟ್‌ನ ನವೀನ್ ಶೆಣೈ, ಲಕ್ಷ್ಮಿಕಾಂತ ಬೆಸ್ಕೂರ್ ಉಪಸ್ಥಿತರಿದ್ದರು.