×
Ad

ಆಳ್ವಾಸ್ ನುಡಿಸಿರಿಯಲ್ಲಿ ಛಾಯಾಚಿತ್ರ ಸ್ಪರ್ಧೆ

Update: 2016-10-12 23:55 IST

ಉಡುಪಿ, ಅ.12: ಛಾಯಾಚಿತ್ರಕ್ಕೂ ಕಲೆಯ ಸ್ಥಾನಮಾನ ಕಲ್ಪಿಸಿಕೊಡುವ ಉದ್ದೇಶದಿಂದ ಆಳ್ವಾಸ್ ನುಡಿಸಿರಿಯ ಅಂಗವಾಗಿ ‘ಆಳ್ವಾಸ್ ರಾಷ್ಟ್ರೀಯ ಛಾಯಾಚಿತ್ರ ಸಿರಿ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.

ಫೋಕ್‌ಲೋರ್, ಹೆರಿಟೇಜ್, ನೇಚರ್ ಮತ್ತು ಪೀಪಲ್ ವಿಭಾಗಗಳಲ್ಲಿ ಈ ಬಾರಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿ ವಿಭಾಗದಲ್ಲೂ ಪ್ರಥಮ 10 ಸಾವಿರ ರೂ., ದ್ವಿತೀಯ 7 ಸಾವಿರ ಮತ್ತು ತೃತೀಯ 5 ಸಾವಿರ ರೂ. ಬಹುಮಾನ ಇದೆ. ಪ್ರತಿ ವಿಭಾಗದಲ್ಲೂ ಸಮಾಧಾನಕರ ಬಹುಮಾನವೂ ಇದೆ ಎಂದು ಆಳ್ವಾಸ್ ರಾಷ್ಟ್ರೀಯ ಛಾಯಾಚಿತ್ರ ಸಿರಿ ಸ್ಪರ್ಧೆಯ ಸಂಘಟನಾ ಕಾರ್ಯದರ್ಶಿ ಆಸ್ಟ್ರೋಮೋಹನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಲ್ಕು ವಿಭಾಗಗಳಲ್ಲಿ ಜರಗುವ ಸ್ಪರ್ಧೆಯಲ್ಲಿ ವಿಜೇತರ ಹಾಗೂ ಆಯ್ಕೆಯಾದ ಒಟ್ಟು 60 ಚಿತ್ರಗಳನ್ನು ಆಳ್ವಾಸ್ ನುಡಿಸಿರಿ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು. ಚಿತ್ರಗಳನ್ನು ಆನ್‌ಲೈನ್ ಮೂಲಕವೇ ಕಳುಹಿಸಬೇಕು. ಎಲ್ಲಾ ಮಾಹಿತಿಗಳು .WWW.PHOTOSIRI.COM ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಛಾಯಾಚಿತ್ರ ಸಿರಿ ಪ್ರಶಸ್ತಿ: ಚಿತ್ರಕಲಾವಿದರಿಗೆ ಪ್ರತಿವರ್ಷ ನೀಡಲಾಗುವ ವಿಶೇಷ ಪುರಸ್ಕಾರವನ್ನು ಈ ಬಾರಿಯಿಂದ ಛಾಯಾಚಿತ್ರ ಕಲಾವಿದರಿಗೂ ವಿಸ್ತರಿಸಲು ಆಳ್ವಾಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಡಾ. ಮೋಹನ್ ಆಳ್ವ ನಿರ್ಧರಿಸಿದ್ದಾರೆ. ನ.13ರಂದು ನೀಡಲಾಗುವ ಈ ಪ್ರಶಸ್ತಿಗಾಗಿ ಅರ್ಹ ಛಾಯಾಗ್ರಾಹಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದವರು ತಿಳಿಸಿದ್ದಾರೆ.

ಛಾಯಾಚಿತ್ರ ಸ್ಪರ್ಧೆಯಲ್ಲಿ ಮಂಗಳೂರಿನ ಹಿರಿಯ ಛಾಯಾಚಿತ್ರಗಾರ ಯಜ್ಞ, ಬೆಂಗಳೂರಿನ ಕೆ.ಎ.ಸೂರ್ಯಪ್ರಕಾಶ್ ಹಾಗೂ ತಾವು ತೀರ್ಪುಗಾರರಾಗಿದ್ದು, ಜಿನೇಶ್ ಪ್ರಸಾದ್, ರವಿ ಪೊಸವಣಿಕೆ, ಜನಾರ್ದನ ಕೊಡವೂರು ಹಾಗೂ ಅಪುಲ್ ಇರಾ ಸಲಹೆಗಾರರಾಗಿದ್ದಾರೆ ಎಂದು ಆಸ್ಟ್ರೋ ಮೋಹನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News