ನೇತ್ರದಾನ ಜಾಗೃತಿಗಾಗಿ ‘ಉಡುಪಿ ಅಂಧರ ನಡೆ’

Update: 2016-10-13 15:33 GMT

ಉಡುಪಿ, ಅ.13: ದಿ ಪ್ರಾಜೆಕ್ಟ್ ವಿಶನ್ ಆಶ್ರಯದಲ್ಲಿ ಆರೋಗ್ಯ ಆಯೋಗ, ಯುವಜನ ಮತ್ತು ಪೆರಂಪಳ್ಳಿ ಫಾತಿಮಾ ಇಗರ್ಜಿ ಸಹಯೋಗ ದೊಂದಿಗೆ ವಿಶ್ವ ದೃಷ್ಟಿ ದಿನಾಚರಣೆಯ ಪ್ರಯುಕ್ತ ‘ಉಡುಪಿ ಅಂಧರ ನಡೆ’ ನೇತ್ರದಾನ ಸಾಮೂಹಿಕ ಜಾಗೃತಿ ಕಾರ್ಯಕ್ರಮವನ್ನು ಗುರುವಾರ ಉಡುಪಿ ನಗರದಲ್ಲಿ ಆಯೋಜಿಸಲಾಗಿತ್ತು.

ಅಂಧರ ನಡೆಗೆ ಉಡುಪಿ ಸಂಚಾರಿಪೊಲೀಸ್ ಠಾಣೆಯ ಎದುರು ಚಾಲನೆ ನೀಡಲಾಯಿತು. ಅಂಧರಾದ ಮಂಗಳೂರು ರೆಸಿಡೆನ್ಸಿಯಲ್ ಅಂಧರ ಶಾಲೆಯ ಪ್ರಾಂಶುಪಾಲ ಕ್ಯಾಲಿಸ್ಟಸ್ ಡೇಸಾ, ಉಡುಪಿಯ ಶಿವು ಮತ್ತು ನಾರಾಯಣ ಪೂಜಾರಿ ಅವರೊಂದಿಗೆ ವಿದ್ಯಾರ್ಥಿಗಳು, ಧರ್ಮ ಗುರುಗಳು, ಸಾರ್ವಜನಿಕರು ತಮ್ಮ ಕಣ್ಣುಗಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಉಡುಪಿ ಕೆ.ಎಂ.ಮಾರ್ಗದಲ್ಲಿರುವ ಶೋಕ ಮಾತ ಇಗರ್ಜಿಯವರೆಗೆ ಹೆಜ್ಜೆ ಹಾಕಿ ಜನಜಾಗೃತಿ ಮೂಡಿಸಿದರು.

ಬಳಿಕ ಚರ್ಚ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ.ಕೃಷ್ಣಪ್ರಸಾದ್, ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ಕಾರ್ಯದರ್ಶಿ ವಂ.ಡೆನಿಸ್ ಡೇಸಾ, ಫಾತಿಮಾ ಇಗರ್ಜಿಯ ಧರ್ಮಗುರು ವಂ.ರೊಮಿಯೊ ಲುವಿಸ್, ಸಂತ ಆಗ್ನೆಸ್ ಕಾನ್ಸೆಂಟಿನ್ ಅಧೀಕ್ಷಕಿ ಧರ್ಮಭಗಿನಿ ಲೆನಿಟಾ ಡಿಸೋಜ ನೇತ್ರದಾನದ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಶೋಕಮಾತಾ ಇಗರ್ಜಿ ಧರ್ಮಗುರು ಫಾ.ಫೆಡ್ರಿಕ್ ಮಸ್ಕರೇನಸ್, ಉಡುಪಿ ಧರ್ಮ ಪ್ರಾಂತ್ಯದ ಶಿಕ್ಷಣ ಆಯೋಗದ ಕಾರ್ಯದರ್ಶಿ ವಂ.ಲಾರೆನ್ಸ್ ಡಿಸೋಜ, ಉಡುಪಿ ಮಹೇಶ್ ಕಾಲೇಜಿನ ಪ್ರಾಂಶುಪಾಲ ಹರಿಪ್ರಸಾದ್ ಮೊದಲಾದ ವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೆರೆದವರು ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದರು. ಭಗಿನಿ ಲೀನಾ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಲವೀನಾ ಡಿಸೋಜ ಸ್ವಾಗತಿಸಿದರು. ಜೆರೊಮ್ ಸಲ್ದಾನ ವಂದಿಸಿದರು. ನಿಶಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News