ಚೈತ್ರಾ ಪೂಜಾರಿ ಆತ್ಮಹತ್ಯೆ ಪ್ರಕರಣ: ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆಗ್ರಹ

Update: 2016-10-13 15:36 GMT

ಉಡುಪಿ, ಅ.13: ಸಂತೆಕಟ್ಟೆ ಬಳಿ ಕೆ.ಜಿ.ರೋಡ್ ಸೇತುವೆಯಿಂದ ಸ್ವರ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಚೈತ್ರಾ ಪೂಜಾರಿ ಪ್ರಕರಣ ಸಂಶಯಾಸ್ಪದವಾಗಿದ್ದು, ಅಪ್ರಾಪ್ತಳಾಗಿದ್ದ ಆಕೆಯ ಮೇಲೆ ಲೈಂಗಿಕ ಕಿರುಕುಳ ನಡೆದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಬೇಕೆಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಗ್ರಹಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ, ಚೈತ್ರಾಳ ಸಂಶಯಾಸ್ಪದ ಆತ್ಮಹತ್ಯೆಗೆ ಆಕೆಯ ಪ್ರಿಯತಮ ದೊಡ್ಡಣಗುಡ್ಡೆಯ ಆದರ್ಶ್ ಹಾಗೂ ಆತನ ಗೆಳೆಯ ರಾದ ಮಲ್ಪೆಯ ಪವನ್ ಮತ್ತು ಸಾಗರ್ ಎಂಬವರ ದುಷ್ಪ್ರೇರಣೆ ಮತ್ತು ಪ್ರಚೋದನೆಯೇ ಕಾರಣ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ದೂರಿದರು.

ಚೈತ್ರಾ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕಳಾಗಿರುವುದು(ಜನ್ಮ ದಿನಾಂಕ: 08-10-1998) ದಾಖಲೆಗಳಿಂದ ಸಾಬೀತಾಗಿದೆ. ಇದನ್ನು ಈಗಾಗಲೇ ದಾಖಲಾಗಿರುವ ಎಫ್‌ಐಆರ್‌ಗೆ ಸೇರ್ಪಡೆಗೊಳಿಸಿ ತನಿಖೆಯನ್ನು ಚುರುಕುಗೊಳಿಸಬೇಕಾಗಿದೆ. ಆರೋಪಿಗಳು ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ಇದರಲ್ಲಿ ಕಾಣದ ರಾಜಕೀಯ ಕೈಗಳು ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದರು.

ಇದೀಗ ಪ್ರಕರಣದ ಆರೋಪಿ ಗಳು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಪೊಲೀಸ್ ಇಲಾಖೆಯು ಸರಕಾರಿ ಅಭಿಯೋಜ ಕರ ಮೂಲಕ ಅವರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸುವಂತೆ ಮಾಡಬೇಕಾ ಗಿದೆ. ಇವರು ಜಾಮೀನಿನಲ್ಲಿ ಬಿಡುಗಡೆಯಾದರೆ ಸಾಕ್ಷನಾಶ ಮಾಡುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

ಇಲಾಖೆಯು ಪ್ರಕರಣದ ಸೂಕ್ತ ತನಿಖೆ ನಡೆಸಿ ನೊಂದ ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದೆ ಇದ್ದಲ್ಲಿ ವಿವಿಧ ಸಂಘಟನೆಗಳು ಒಟ್ಟುಗೂಡಿ ನ್ಯಾಯಕ್ಕಾಗಿ ತೀವ್ರ ಹೋರಾಟ ನಡೆಸ ಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಚೈತ್ರಾಳ ತಂದೆ ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಶಿವಪಾಲನ್ ಬೆಂಗ್ರೆ, ಸಂಘಟನಾ ಕಾರ್ಯದರ್ಶಿ ಶರತ್ ಪೂಜಾರಿ, ದಿವಾಕರ್ ಸನಿಲ್, ರಾಜು ಪೂಜಾರಿ, ಕುಶಲ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News