×
Ad

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಬಿಜೆಪಿಗೆ?

Update: 2016-10-13 21:17 IST

ಉಡುಪಿ, ಅ.13: ಹಿರಿಯರಾದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಗೌರವದಿಂದ ನಡೆಸಿಕೊಂಡಿದ್ದಾರೆ. ಇದರಿಂದ ನೊಂದಿರುವ ಶ್ರೀನಿವಾಸ ಪ್ರಸಾದ್ ಪಕ್ಷ ತ್ಯಜಿಸುತಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದು ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಶ್ರೀನಿವಾಸ ಪ್ರಸಾದ್ ಈ ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಎನ್‌ಡಿಎ ಸರಕಾರದಲ್ಲಿ ಸಚಿವರಾಗಿದ್ದರು. ಈಗ ಅವರು ಯಡಿಯೂರಪ್ಪ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಬಿಜೆಪಿ ಪಕ್ಷ ಸೇರಲಿದ್ದಾರೆ ಎಂದು ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಚಿತ್ರನಟ ಶಿವರಾಮ್ ನಾಳೆ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಪಕ್ಷವನ್ನು ಸೇರಲಿದ್ದಾರೆ. ಮುಂದಿನ 3-4ತಿಂಗಳಲ್ಲಿ ಬಹಳಷ್ಟು ಮಂದಿ ನಾಯಕರು ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂದವರು ಭವಿಷ್ಯ ನುಡಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿವಾದ ಮುಗಿದ ಅಧ್ಯಾಯ. ಕೇಂದ್ರ ನಾಯಕ ರಾಮ್‌ಲಾಲ್ ಅವರು ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರಿಗೂ ಜೊತೆಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಎಲ್ಲರೂ ಜೊತೆಯಾಗಿ 2018ರ ಚುನಾವಣೆಗಾಗಿ ಕೆಲಸ ಮಾಡುತ್ತೇವೆ. ಪಕ್ಷದೊಳಗೆ ಇರುವ ಸಣ್ಣಪುಟ್ಟ ಗೊಂದಲಗಳು ಶೀಘ್ರವೇ ನಿವಾರಣೆಯಾಗಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News