ಯುನಿವೆಫ್‌ನಿಂದ ಮುಸ್ಲಿಮೇತರರಿಗಾಗಿ ಚಿಂತನ ಮಂಥನ ಕಾರ್ಯಕ್ರಮ
ಮಂಗಳೂರು, ಅ.13: ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆಯ ಸ್ಥಾಪನೆಯ ಉದ್ದೇಶದೊಂದಿಗೆ ಯುನಿವೆಫ್ ಕರ್ನಾಟಕ ಪ್ರಾರಂಭಿಸಿದ ಸರ್ವಧರ್ಮೀಯರೊಂದಿಗೆ ಸ್ನೇಹ ಸಂವಾದ ಕಾರ್ಯಕ್ರಮದ ದಶಮಾನೋತ್ಸವ ಕಾರ್ಯಕ್ರಮ ಅಕ್ಟೋಬರ್28ರಂದು ಸಂಜೆ 6:30ಕ್ಕೆ ಬಲ್ಮಠ ಮಿಶನ್ ಕಂಪೌಂಡ್‌ನಲ್ಲಿರುವ ಶಾಂತಿ ನಿಲಯದಲ್ಲಿ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ವಿವಿಧ ಧರ್ಮೀಯರೊಂದಿಗೆ ಚಿಂತನ ಮಂಥನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ದೇಶದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಅದರ ಮೂಲರೂಪದಲ್ಲಿ ಮರಳಿ ಸ್ಥಾಪಿಸುವುದು ಕಾಲದ ಅತಿ ದೊಡ್ಡ ಬೇಡಿಕೆಯಾಗಿದೆ. ಅಪಕಲ್ಪನೆಯನ್ನು ಅಳಿಸಿ ಪರಸ್ಪರ ನಂಬಿಕೆಯ ಸಮಾಜ ನಿರ್ಮಾಣ ಇಂಥ ಕಾರ್ಯಕ್ರಮಗಳಿಂದ ಸಾಧ್ಯವೆಂಬ ಧೃಢವಾದ ನಂಬಿಕೆಯನ್ನಿಟ್ಟುಕೊಂಡು ಯುನಿವೆಫ್ ಕರ್ನಾಟಕ ಕಾರ್ಯಾಚರಿಸುತ್ತಿದೆ.
ಅ.15ರಂದು ಸಂಜೆ 4ಗಂಟೆಗೆ ಮಂಗಳೂರಿನ ಫಳ್ನೀರ್‌ನ ಇಂದಿರಾ ಆಸ್ಪತ್ರೆ ಬಳಿ ಇರುವ ಲುಲು ಸೆಂಟರ್‌ನ ಮೊದಲ ಮಹಡಿಯಲ್ಲಿ ಮುಸ್ಲಿಮೇತರ ಬುದ್ಧಿಜೀವಿಗಳಿಗಾಗಿ ಭಾರತದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ- ಅಗತ್ಯ ಮತ್ತು ಔಚಿತ್ಯ ಎಂಬ ವಿಷಯದಲ್ಲಿ ಚಿಂತನ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಭೂಷಣ್ ಗುಲಾಬ್ ರಾವ್ ಬೊರಸೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕ ಯು.ಕೆ. ಖಾಲಿದ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.