ನೇಣು ಬಿಗಿದು ಆಶಾ ಕಾರ್ಯಕರ್ತೆ ಆತ್ಮಹತ್ಯೆ
ಬಂಟ್ವಾಳ, ಅ.13: ನೇಣು ಬಿಗಿದು ಆಶಾ ಕಾರ್ಯಕರ್ತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲ್ಲಡ್ಕ ಸಮೀಪದ ನೆಟ್ಲ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದ್ದು ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ನಿವಾಸಿ ಪುರುಷೋತ್ತಮ ದೇವಾಡಿಗ ಎಂಬವರ ಪತ್ನಿ ಲೀಲಾವತಿ (36) ಆತ್ಮಹತ್ಯೆಗೈದಿರುವವರು. ಇವರು ತನ್ನ ಮನೆಗೆ ತಾಗಿಕೊಂಡಿರುವ ಶೆಡ್‌ನಲ್ಲಿ ಚೂಡಿದಾರ್ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.
ಮಂಗಳೂರು ತಾಲೂಕಿನ ಕಾವೂರು ನಿವಾಸಿ ರಘು ದೇವಾಡಿಗ ಎಂಬವರ ಪುತ್ರಿಯಾಗಿರುವ ಲೀಲಾವತಿಯನ್ನು 14 ವರ್ಷಗಳ ಹಿಂದೆ ಪುರುಷೋತ್ತಮ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಆಶಾ ಕಾರ್ಯಕರ್ತೆಯಾಗಿರುವ ಅವರು ಕೆಲಸಕ್ಕೆ ಹೋಗುವುದರ ಬಗ್ಗೆ ಪತಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದ. ಇಂದು ಕೂಡಾ ಕೆಲಸಕ್ಕೆ ಹೋಗದಂತೆ ಪತಿ ಆಕ್ಷೇಪ ವ್ಯಕ್ತಪಡಿಸಿದ್ದು ಈ ಬಗ್ಗೆ ಲೀಲಾವತಿ ತನ್ನ ತಂದೆಗೆ ಕರೆ ಮಾಡಿ ತಿಳಿಸಿದ್ದಾಳೆ ಎಂದು ಲೀಲಾವತಿಯ ತಂದೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಶಾಲೆಗೆ ರಜೆ ಇರುವುದರಿಂದ ಅವರು ಕಾವೂರಿನ ಅಜ್ಜಿಯ ಮನೆಯಲ್ಲಿದ್ದರು. ಟೈಲ್ಸ್ ಕೆಲಸಗಾರನಾಗಿರುವ ಪುರುಷೋತ್ತಮ ಇಂದು ಬೆಳಗ್ಗೆ ಪದಾರ್ಥಕ್ಕೆ ಮೀನು ತೆಗೆದುಕೊಟ್ಟು ಬಿ.ಸಿ.ರೋಡಿಗೆ ಬಂದಿದ್ದು ಮಧ್ಯಾಹ್ನದ ವೇಳೆ ಮನೆಗೆ ವಾಪಸ್ ತೆರಳಿದಾಗ ಮನೆ ಬಾಗಿಲು ತೆರೆದಿತ್ತು. ಮನೆಯೊಳಗೆ ಪತ್ನಿಯನ್ನು ಕಾಣದಿರುವುದರಿಂದ ಮನೆಗೆ ತಾಗಿಕೊಂಡಿರುವ ಶೆಡ್‌ನಲ್ಲಿ ನೋಡಿದಾಗ ಆತ್ಮಹತ್ಯೆ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ. ಮನೆಯಲ್ಲಿ ಡೆತ್‌ನೋಟ್ ಲಭಿಸಿದ್ದು ’ಎಲ್ಲರಿಗೂ ನಮಸ್ಕಾರ. ನಾನು ತಪ್ಪುಮಾಡುತ್ತಿದ್ದೇನೆ’ ಎಂದು ಅದರಲ್ಲಿ ಬರೆದಿದೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.