ಅಥ್ಲೆಟಿಕ್ ಕ್ರೀಡಾಳುಗಳಿಗೆ 3 ಲಕ್ಷ ರೂ. ಸಹಾಯಧನಕ್ಕೆ ಚಿಂತನೆ: ಮೇಯರ್
ಮಂಗಳೂರು, ಅ. 13: ಪಾಲಿಕೆ ವ್ಯಾಪ್ತಿಯ ಅಥ್ಲೆಟಿಕ್ ಕ್ರೀಡಾಳುಗಳಿಗೆ ರೂ. 3 ಲಕ್ಷ ವಿಶೇಷ ಸಹಾಯಧನ ನೀಡಲು ಚಿಂತನೆ ನಡೆದಿದೆ ಎಂದು ಮೇಯರ್ ಹರಿನಾಥ್ ಕೆ. ಹೇಳಿದ್ದಾರೆ.
ಗುರುವಾರ ಮಂಗಳಾ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಆ್ಯಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ 2 ದಿನಗಳ ಕಾಲ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ 1 ಲಕ್ಷ ರೂ. ಹಾಗೂ ರಾಜ್ಯ ಮಟ್ಟ ಕ್ರೀಡಾಪಟುಗಳಿಗೆ 50,000 ರೂ. ಸಹಾಯಧನ ನೀಡಲು ನಿರ್ಧರಿಸಲಾಗಿದೆ ಎಂದು ಹರಿನಾಥ್ ಹೇಳಿದಲ್ಲದೆ, ಪಾಲಿಕೆ ವ್ಯಾಪ್ತಿಗೆ ಕ್ರೀಡಾನಿಧಿ ಸ್ಥಾಪಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿರುವುದಾಗಿಯೂ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಶಾಸಕ ಅಭಯಚಂದ್ರ ಜೈನ್, ಡಿವೈಇಎಸ್ ಉಪನಿರ್ದೇಶಕ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.
ಅರ್ಜನ ಪ್ರಶಸ್ತಿ ವಿಜೇತೆ ಅಥ್ಲ್ಲಿಟ್ ಎಂ. ಆರ್. ಪೂವಮ್ಮ ಮತ್ತು ಇಂಟರ್ ನ್ಯಾಶನಲ್ ಅಥ್ಲೆಟಿಕ್ಸ್ ಕ್ರೀಡಾಪಟು ಅಭಿಷೇಕ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್‌ನ ಅಧ್ಯಕ್ಷ ಮಂಜುನಾಥ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿ ಎ. ತಾರನಾಥ್ ಶೆಟ್ಟಿ ವಂದಿಸಿದರು.