ಇಂದಿನಿಂದ ದಕ್ಷಿಣ ಭಾರತ ಯೋಗ ಕ್ರೀಡಾ ಸ್ಪರ್ಧೆ
ಉಡುಪಿ, ಅ.13: ಹೊಸದಿಲ್ಲಿಯ ಯೋಗಾ ಫೆಡರೇಷನ್ ಆಫ್ ಇಂಡಿಯಾದ ವತಿಯಿಂದ ಪ್ರಥಮ ದಕ್ಷಿಣ ಭಾರತ ಯೋಗ ಕ್ರೀಡಾ ಸ್ಪರ್ಧೆಯು ಅ.14ರಿಂದ 16ರವರೆಗೆ ಉಡುಪಿ ಪರ್ಯಾಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಸ್ಪರ್ಧೆಯ ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎಂ.ನಿರಂಜನ ಮೂರ್ತಿ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಬಡಗುಮಳಿಗೆಯಲ್ಲಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗಾಸನ ಸ್ಪರ್ಧೆಯನ್ನು ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್‌ಅಸೋಸಿಯೇಶನ್, ಎಸ್‌ಜಿಎಸ್ ಯೋಗಾ ಫೌಂಡೇಷನ್ ಹಾಗೂ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಯೋಗವನ್ನು ಕ್ರೀಡೆಯಾಗಿ ಪರಿಗಣಿಸಿ ಈ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ಇದರಲ್ಲಿ ದಕ್ಷಿಣ ಭಾರತದ ಏಳು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಪುದುಚೇರಿ, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಅಂಡಮಾನ್-ನಿಕೋಬಾರ್ 250ರಿಂದ 300 ಮಂದಿ ಯೋಗ ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಕಳೆದ 40 ವರ್ಷಗಳಿಂದ ಯೋಗ ಪ್ರಚಾರದಲ್ಲಿ ತೊಡಗಿರುವ ಯೋಗ ಫೆಡರೇಷನ್ ಆಫ್ ಇಂಡಿಯಾ, ಪ್ರತೀ ವರ್ಷ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು, ಇದೇ ಮೊದಲ ಬಾರಿ ದಕ್ಷಿಣ ಭಾರತ ಮಟ್ಟದ ಯೋಗ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
8ರಿಂದ 35 ವರ್ಷ ವಯೋಮಿತಿಯ ಯೋಗಪಟುಗಳು ಒಟ್ಟು ಎಂಟು ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಪ್ರತೀ ವಿಭಾಗಗಳಲ್ಲೂ 10 ಆಸನ ಸ್ಪರ್ಧೆಗಳಿರುತ್ತವೆ. ಪ್ರತಿ ಸ್ಪರ್ಧೆಗೂ ಅಗ್ರಸ್ಥಾನಿ ಮೂವರಿಗೆ ಬಹುಮಾನಗಳನ್ನು ನೀಡಲಾಗುವುದು. ಮುಂದಿನ ತಿಂಗಳು ರಾಂಚಿಯಲ್ಲಿ ನಡೆಯುವ 41ನೆ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುವ ಯೋಗ ಪಟುಗಳೆ ಇಲ್ಲೂ ಸ್ಪರ್ಧಿಸಲಿದ್ದಾರೆ ಎಂದವರು ನುಡಿದರು.
ಯೋಗ ಸ್ಪರ್ಧೆಯನ್ನು ಅ.14ರಂದು ಬೆಳಗ್ಗೆ 11ಕ್ಕೆ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರ ಉಪಸ್ಥಿತಿಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದು, ಅಂತಾರಾಷ್ಟ್ರೀಯ ಯೋಗ ಫೆಡರೇಷನ್ ಹಾಗೂ ಯೋಗಾ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅಶೋಕ ಕುಮಾರ್ ಅಗರ್ವಾಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅ.16ರಂದು 11ಕ್ಕೆ ನಡೆಯುವ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಗಂಗಾಧರಯ್ಯ, ಸಂಘಟನಾ ಸಮಿತಿಯ ಕಾರ್ಯದರ್ಶಿ ಡಾ.ಕೆಂಪರಾಜ್, ಜಂಟಿ ಕಾರ್ಯದರ್ಶಿ ಡಾ.ಐ.ಶಶಿಕಾಂತ ಜೈನ್, ಜಿ.ಎನ್.ಕೃಷ್ಣಮೂರ್ತಿ ಹಾಗೂ ಕೆ.ಶ್ರೀಕಾಂತ ಉಪಾಧ್ಯಾಯ ಉಪಸ್ಥಿತರಿದ್ದರು.