ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ನೇಮಿರಾಜ್ ಅಮಾನತು

Update: 2016-10-14 15:57 GMT

ಬೆಳ್ತಂಗಡಿ, ಅ.14: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲಂಚ ಕೇಳಿದ ಆರೋಪದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ನೇಮಿರಾಜ್ ಅವರನ್ನು ಅಮಾನತು ಮಾಡಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಪೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ ಎಂಬ ಆರೋಪದ ಮೇಲೆ ಧರ್ಮಸ್ಥಳದ ನಿವಾಸಿ ಧನಕೀರ್ತಿ ಆರಿಗ ಎಂಬವರ ಪುತ್ರ ಅಭಿಷೇಕ್ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ದೂರಿಗೆ ಸಂಬಂಧಿಸಿದಂತೆ ಪ್ರಕರಣವನ್ನು ಮುಗಿಸಲು ಧನಕೀರ್ತಿ ಅವರಿಗೆ ದೂರವಾಣಿ ಕರೆ ಮಾಡಿ 20 ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದರೆನ್ನಲಾಗಿದೆ.

ಆದರೆ ಪ್ರಸ್ತುತ ಧನಕೀರ್ತಿ ಮತ್ತು ನೇಮಿರಾಜು ಅವರ ನಡುವಿನ ದೂರವಾಣಿ ಸಂಭಾಷಣೆ ಧನಕೀರ್ತಿ ಅವರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿತ್ತು. ಈ ಬಗ್ಗೆ ಇನ್ಸ್‌ಪೆಕ್ಟರ್ ವಿರುದ್ಧ ಧನಕೀರ್ತಿ ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ಅವರಿಗೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ, ಐಜಿಪಿಯವರಿಗೆ ಶಿಫಾರಸು ಮಾಡಿದ್ದರು. ಅದರಂತೆ ಐಜಿಪಿಯವರು ಇನ್ಸ್‌ಪೆಕ್ಟರ್‌ನ್ನು ಅಮಾನತುಗೊಳಿಸಿ ಇಂದು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News