ಸರಿಯಾಗಿ ಸರಕಾರ ನಡೆಸದಿದ್ದರೆ ಎಳೆದು ಕೆಳಗೆ ಹಾಕುವೆ: ಪತ್ನಿಯಿಂದ ಬೆದರಿಕೆ
ಅಬುಜ, ಅಕ್ಟೋಬರ್ 14: ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ ಮುಂದುವರಿದರೆ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದು ಎಂದು ನೈಜೀರಿಯನ್ ಅಧ್ಯಕ್ಷರ ಪತ್ನಿ ಬೆದರಿಕೆ ಒಡ್ಡಿದ್ದಾರೆಂದು ವರದಿಯಾಗಿದೆ. ನಿಯಂತ್ರಣಕಳೆದುಕೊಂಡಿರುವ ಸರಕಾರಿ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಸೋಲಿಸಲಾಗುವುದು ಎಂದು ಅಧ್ಯಕ್ಷ ಮುಹಮ್ಮದ್ ಬುಹಾರಿಯ ಪತ್ನಿ ಐಶಾ ಬುಹಾರಿ ಮುನ್ನೆಚ್ಚರಿಕೆ ನೀಡಿದ್ದಾರೆ.
ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ನೈಜೀರಿಯದ ಪ್ರಥಮ ಮಹಿಳೆ ಈ ರೀತಿ ಹೇಳಿದ್ದಾರೆ. ತನ್ನ ಸರಕಾರದ ಅಡಿಯಲ್ಲಿ ನಡೆಯುತ್ತಿರುವ ವಿಷಯಗಳ ಕುರಿತು ಅಧ್ಯಕ್ಷರಿಗೆ ಯಾವುದೇ ಅರಿವಿಲ್ಲ. ತಾನು ನೇಮಿಸಿದ ಅಧಿಕಾರಿಗಳು ಯಾರೆಂದು ಕೂಡಾ ಅವರಿಗೆ ತಿಳಿದಿಲ್ಲ ಎಂದು ಐಶಾ ಬುಹಾರಿ ಪತಿಯ ವಿರುದ್ಧ ಆರೋಪಹೊರಿಸಿದ್ದಾರೆ.
ಹೊಸದಾಗಿ ನೇಮಕಗೊಂಡ ಐವತ್ತು ಅಧಿಕಾರಿಗಳಲ್ಲಿ 45 ಮಂದಿಯ ಕುರಿತು ಅಧ್ಯಕ್ಷರು ಅರಿತಿಲ್ಲ. ಕೆಲವರ ಸಂಬಂಧಿಕರು ಸರಕಾರದ ಪ್ರಧಾನ ಸ್ಥಾನಗಳಲ್ಲಿ ನೇಮಕವಾಗಿದ್ದಾರೆ. ಇವರಲ್ಲಿ ಕೆಲವರು ಕೆಲಸ ಮಾಡದೆ ಮನೆಯಲ್ಲಿ ಆರಾಮವಾಗಿ ಕೂತಿದ್ದಾರೆಂದು ಐಶಾ ಆರೋಪಿಸಿದ್ದಾರೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತವನ್ನು ಕೊನೆಗೊಳಿಸುವೆ ಎಂಬ ಭರವಸೆ ನೀಡಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮುಹಮ್ಮದ್ ಬುಹಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಯಾರಿಗಾಗಿಯೂ ಅಲ್ಲ ಎಲ್ಲರಿಗಾಗಿ ತಾನು ಇದ್ದೇನೆ ಎಂದು ಹೇಳಿ ಅಧ್ಯಕ್ಷರು ನಿರೀಕ್ಷೆ ಹುಟ್ಟಿಸಿದ್ದರು. ಸರಕಾರ ಈ ರೀತಿ ಹೋಗುವುದಾದರೆ 2019ರ ಚುನಾವಣೆಯಲ್ಲಿ ಸರಕಾರದ ವಿರುದ್ಧ ತಾನು ರಂಗಕ್ಕಿಳಿಯುವೆ ಎಂದು ಐಶಾ ಎಚ್ಚರಿಕೆ ನೀಡಿದ್ದಾರೆ. ಐಶಾ ಬುಹಾರಿ ನೈಜೀರಿಯದ ರಾಜಕೀಯದಲ್ಲಿ ಪ್ರಭಾವ ಇರುವ ಮಹಿಳೆಯಾಗಿದ್ದು ಅವರು ಸಮಾಜ ಸೇವಕಿ ಮತ್ತು ಬರಹಗಾರ್ತಿಯೂ ಆಗಿದ್ದಾರೆಂದು ವರದಿ ತಿಳಿಸಿದೆ.