ಸಂತ ಅಲೋಶಿಯಸ್ ಕಾಲೇಜಿಗೆ ಕೇಂದ್ರ ಸರಕಾರದ ಸ್ಟಾರ್ ಕಾಲೇಜು ಸ್ಕೀಂನಿಂದ ಮಾನ್ಯತೆ

Update: 2016-10-14 10:22 GMT

ಮಂಗಳೂರು, ಅ.14: ಕೇಂದ್ರ ಸರಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ಸ್ವಾಯತ್ತ ಸಂಸ್ಥೆಯಾಗಿರುವ ಸಂತ ಅಲೋಶಿಯಸ್ ಕಾಲೇಜಿಗೆ ಸ್ಟಾರ್ ಕಾಲೇಜು ಸ್ಕೀಂನಿಂದ ‘ಮೇಲ್ದರ್ಜೆಯ ಸ್ಟಾರ್ ಸ್ಟೇಟಸ್ ಕಾಲೇಜು’ ಮಾನ್ಯತೆ ಲಭ್ಯವಾಗಿದೆ.

ಮೂಲ ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಕಾಲೇಜು ಸಲ್ಲಿಸಿರುವ ಗಣನೀಯ ಸೇವೆ ಹಾಗೂ ಮಾಡಿರುವ ಸಾಧನೆಗಳನ್ನು ಪರಿಗಣಿಸಿ ಈ ಮಾನ್ಯತೆ ನೀಡಲಾಗಿದೆ. ಇಡೀ ದೇಶದ ಕೇವಲ 17 ಕಾಲೇಜುಗಳಿಗೆ ಇಂತಹ ಮಾನ್ಯತೆ ಲಭ್ಯವಾಗಿದೆ. ಕರ್ನಾಟಕ ರಾಜ್ಯದಲ್ಲಿ ಸಂತ ಅಲೋಶಿಯಸ್ ಕಾಲೇಜೂ ಸೇರಿದಂತೆ ಕೇವಲ ಎರಡು ಕಾಲೇಜುಗಳಿಗೆ ಈ ಪ್ರತಿಷ್ಟಿತ ಮಾನ್ಯತೆ ನೀಡಲಾಗಿದೆ ಎಂದು ಕಾಲೇಜು ಪ್ರಕಟನೆ ತಿಳಿಸಿದೆ.

ಇಲಾಖೆಯಿಂದ ಬಂದಿರುವ ಸಂದೇಶದಲ್ಲಿ ತಜ್ಞರ ಸಮಿತಿ ಕಾಲೇಜು ಮಾಡಿರುವ ಸಾಧನೆಗಳನ್ನು ಪ್ರಶಂಸಿಸಿ ಸ್ಟಾರ್ ಸ್ಟೇಟಸ್ ನೀಡಿರುವುದನ್ನು ಉಲ್ಲೇಖಿಸಲಾಗಿದೆ. ಕಳೆದ 5 ವರ್ಷಗಳಿಂದ ಕಾಲೇಜಿಗೆ ಸ್ಟಾರ್ ಕಾಲೇಜು ಎಂದು ಮಾನ್ಯತೆ ನೀಡಲಾಗಿತ್ತು.

ಸ್ಟಾರ್ ಸ್ಟೇಟಸ್ ಯೋಜನೆಯಡಿಯಲ್ಲಿ ಕಾಲೇಜಿನ 5 ವಿಜ್ಞಾನ ವಿಭಾಗಗಳಿಗೆ ಮುಂದಿನ 3 ವರ್ಷಗಳಲ್ಲಿ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ತಲಾ 19 ಲಕ್ಷ ರೂಪಾಯಿಗಳಂತೆ ಒಟ್ಟು 95 ಲಕ್ಷ ರೂಪಾಯಿಗಳ ಅನುದಾನ ದೊರೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News