ಪಡುಮಲೆಯಲ್ಲಿ ಗರಡಿ, ಐತಿಹ್ಯಗಳ ಜೀರ್ಣೋದ್ಧಾರ: ಹರಿಕೃಷ್ಣ ಬಂಟ್ವಾಳ

Update: 2016-10-14 10:44 GMT

ಮಂಗಳೂರು, ಅ.14: ಕೋಟಿಚೆನ್ನಯರ ಜನ್ಮಸ್ಥಾನ ಪುತ್ತೂರು ತಾಲೂಕಿನ ಪಡವನ್ನೂರು ಗ್ರಾಮದ ಪಡುಮಲೆಯಲ್ಲಿ ಗರಡಿ ನಿರ್ಮಾಣ ಮತ್ತು ಅವರ ಆರಾಧ್ಯ ದೇವರುಗಳಾದ ನಾಗಬೆರ್ಮರ ಗುಡಿ ನಿರ್ಮಾಣ ಸಹಿತ ಜೀವನಗಾಥೆ ಸಾರುವ 26 ಐತಿಹ್ಯಗಳನ್ನು ಸರ್ವಧರ್ಮೀಯರ ಸಹಕಾರದೊಂದಿಗೆ ಜೀರ್ಣೋದ್ಧಾರಕ್ಕೆ ತೀರ್ಮಾನಿಸಲಾಗಿದೆ ಎಂದು ಪಡುಮಲೆ ಕೋಟಿ -ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೂರ್ವಭಾವಿಯಾಗಿ ಅಕ್ಟೋಬರ್ 16 ರಂದು ಪೂರ್ವಾಹ್ನ 10 ಕ್ಕೆ ಸೋಣ ನೇಮದ ಸತ್ಯದ ಛಾವಡಿಯಲ್ಲಿ ಪಡುಮಲೆ ಗ್ರಾಮಸ್ಥರ ಸಭೆ ನಡೆಯಲಿದ್ದು ಊರ ಮತ್ತು ಪರವೂರ ಭಕ್ತಾದಿಗಳು ಆಗಮಿಸಲಿದ್ದಾರೆ. ಅ. 17 ಮತ್ತು 18 ರಂದು ಗರಡಿ ನಿರ್ಮಾಣ ಪ್ರಯುಕ್ತ ನಾಗಬ್ರಹ್ಮ ದೇವರ ಪ್ರತಿಷ್ಠೆ ಮತ್ತು ಮಲ್ಲಯ್ಯ ಬುದ್ಧಿವಂತ ಪ್ರೇತಕ್ಕೆ ಮೋಕ್ಷ ಸಹಿತ ವೈದಿಕ ವಿಧಿ-ವಿಧಾನಗಳು ಜರಗಲಿವೆ ಎಂದು ತಿಳಿಸಿದರು.

ಕೋಟಿಚೆನ್ನಯರ ಜನ್ಮಸ್ಥಾನ ಪ್ರಸ್ತುತ ಚಲನಚಿತ್ರ ನಟ ವಿನೋದ ಆಳ್ವರ ಪತ್ನಿಯ ಹೆಸರಿನಲ್ಲಿ ಹಕ್ಕು ಹೊಂದಿದ್ದು, ಟ್ರಸ್ಟ್‌ಗೆ 1.5 ಎಕರೆಯನ್ನು ದಾನದ ರೂಪದಲ್ಲಿ ಹಕ್ಕುಪತ್ರ ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ಕಂದಾಯ ಇಲಾಖೆಯಿಂದ ದಾಖಲಾತಿಗಳ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ ವಿವಿಧ ಜಾತಿಮತಗಳ ಪ್ರಮುಖರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಮಾಜಿ ಶಾಸಕ ಎ. ರುಕ್ಮಯ್ಯ ಪೂಜಾರಿ, ಉಪಾಧ್ಯಕ್ಷರುಗಳಾದ ವಿಜಯಕುಮಾರ್ ಸೊರಕೆ, ಮನೋಜ್ ರೈ ಪೇರಾಲು, ಪದ್ಮನಾಭ ಕೋಟ್ಯಾನ್ ನೀರುಮಾರ್ಗ, ರೋಹಿನಾಥ್ ಪಾದೆ, ಶ್ರೀಧರ ಪಟ್ಲ, ಶೇಖರ ನಾರಾವಿ, ಸಂತೋಷ್ ಕುಮಾರ್ ಕಾಪಿನಡ್ಕ, ಕೃಷ್ಣ ಪೂಜಾರಿ ಕಲ್ಲಡ್ಕ, ಮಾಜಿ ಜಿ.ಪಂ.ಸದಸ್ಯ ಶೈಲೇಶ್ ಕುಮಾರ್, ಉದ್ಯಮಿ ಲೋಕನಾಥ್, ಸುರೇಶ್ಚಂದ್ರ ಕೋಟ್ಯಾನ್, ಲೋಕಯ್ಯ ಬಜ್ಪೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News