ಇಂದ್ರಿಯ, ಮನಸ್ಸುಗಳ ಹತೋಟಿಗೆ ಯೋಗ ಪ್ರಮುಖ ಸಾಧನ: ಪೇಜಾವರಶ್ರೀ

Update: 2016-10-14 11:44 GMT

ಉಡುಪಿ, ಅ.14: ನಮ್ಮ ಇಂದ್ರಿಯ ಮನಸ್ಸುಗಳ ಮೇಲೆ ನಿಯಂತ್ರಣ ಅಗತ್ಯ. ಅದು ನಾವು ಹೇಳಿದಂತೆ ಕೇಳಬೇಕೆ ಹೊರತು ಅದು ಹೇಳಿದ ಹಾಗೆ ನಾವು ಕೇಳಬಾರದು. ಆದರೆ ಇಂದು ಇಂದ್ರಿಯ, ಮನಸ್ಸುಗಳ ಮೇಲೆ ಹತೋಟಿ ಇಲ್ಲವಾಗಿದೆ. ಅದುವೇ ನಮ್ಮ ಮೇಲೆ ಸವಾರಿ ಮಾಡುತ್ತಿದೆ. ಇವುಗಳನ್ನು ನಿಯಂತ್ರಿಸ ಬೇಕಾದರೆ ಯೋಗ ಅತ್ಯಂತ ದೊಡ್ಡ ಸಾಧನವಾಗಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಹೊಸದಿಲ್ಲಿ ಯೋಗಾ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗಾ ಸ್ಪೋರ್ಟ್ಸ್ ಅಸೋಸಿಯೇಶನ್, ಎಸ್‌ಜಿಎಸ್ ಯೋಗಾ ಫೌಂಡೇಶನ್, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಉಡುಪಿ ಶ್ರೀಕೃಷ್ಣ ಮಠದ ಸಹಯೋಗದೊಂದಿಗೆ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಪ್ರಥಮ ದಕ್ಷಿಣ ಭಾರತ ಯೋಗಾಸನ ಸ್ಪರ್ಧೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಯೋಗ ಕಲೆಯು ಪ್ರಾಚೀನ ಭಾರತದ ಸರ್ವಶ್ರೇಷ್ಠ ಆಸ್ತಿ. ಇದರಿಂದ ಮನಸ್ಸು ಮತ್ತು ದೇಹದ ನಿಯಂತ್ರಣ ಸಾಧ್ಯ. ಇದರಿಂದ ಪ್ರತಿಯೊಬ್ಬರಿಗೂ ತುಂಬಾ ಲಾಭ ಇದೆ. ಈ ಬಾರಿ ಕ್ರೀಡಾ ಇಲಾಖೆ ನೀಡುವ ಏಕಲವ್ಯ ಪ್ರಶಸ್ತಿಯನ್ನು ಯೋಗಪಟುವಿಗೆ ನೀಡಲಾಗಿದೆ ಎಂದರು.

ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಅಂತಾರಾಷ್ಟ್ರೀಯ ಯೋಗ ಫೆಡರೇಶನ್ ಮತ್ತು ಯೋಗ ಫೆಡರೇಶನ್ ಆಫ್ ಇಂಡಿಯಾ ಇದರ ಗೌರವ ಕಾರ್ಯದರ್ಶಿ ಅಶೋಕ್ ಅಗರವಾಲ್, ಮಣಿಪಾಲ ವಿವಿಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಭಟ್ಸ್ ಇಂಟರ್‌ನೇಶನಲ್ ಇನ್ಸಿಟ್ಯೂಟ್ ಆಫ್ ಹೊಲಿಸ್ಟಿಕ್ ಹೇಲ್ತ್‌ನ ನಿರ್ದೇಶಕ ಡಾ.ಕೆ.ಕೃಷ್ಣ ಭಟ್ ಮಾತನಾಡಿದರು.

ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಗಂಗಾಧರಪ್ಪ, ಯೋಗ ಫೆಡರೇಶನ್ ಆಫ್ ಇಂಡಿಯಾದ ಸಂಚಾಲಕ ಯೋಗಿರಾಜ್ ಎನ್.ರಾಮಲಿಂಗಮ್, ಡಾ.ಅಸಿತ್ ಕುಮಾರ್ ಐಚ್, ಇರಾನಿನ ಎಸ್‌ಜಿಎಸ್ ಯೋಗ ಫೌಂಡೇಶನ್‌ನ ನಿರ್ದೇಶಕರಾದ ಸಹರಾ ಫಿರೂಝಿ ಫರ್ದ್ ಮತ್ತು ಪರಿಸಾ ಮೊಹಮ್ಮದಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯೋಗ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಸ್ಪರ್ಧಾ ಸಮಿತಿಯ ಸಂಘಟನಾ ಕಾರ್ಯ ದರ್ಶಿ ಡಾ.ಎಂ.ನಿರಂಜನ ಮೂರ್ತಿ ಸ್ವಾಗತಿಸಿದರು. ಜಿ.ಎನ್.ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧೆಯಲ್ಲಿ ತಮಿಳುನಾಡು, ಪುದುಚೇರಿ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಅಂಡಮಾನ್ ನಿಕೋಬಾರ್, ಕರ್ನಾಟಕ ರಾಜ್ಯಗಳ 286 ಸ್ಪರ್ಧಾಳುಗಳು ಭಾಗವಹಿಸಿದ್ದು, ಇದರಲ್ಲಿ ವಿಜೇತರಾದವರು ನವೆಂಬರ್ ತಿಂಗಳಲ್ಲಿ ರಾಂಚಿಯಲ್ಲಿ ನಡೆಯುವ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News