ಬೋರ್‌ವೆಲ್ ನಿರ್ಮಾಣಕ್ಕೆ ಅನುಮತಿ ನೀಡಲು ಒತ್ತಾಯಿಸಿ ಬಿಜೆಪಿಯಿಂದ ಧರಣಿ

Update: 2016-10-14 13:26 GMT

ಪುತ್ತೂರು, ಅ.14: ಬೋರ್‌ವೆಲ್ ಕೊರೆಯದಂತೆ ರಾಜ್ಯ ಸರಕಾರ ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆದುಕೊಂಡು ಈ ಹಿಂದಿನಂತೆ ಬೋರ್‌ವೆಲ್ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಇದಕ್ಕೆ ಅವಕಾಶ ನೀಡದಿದ್ದಲ್ಲಿ ಎಸಿ ಮತ್ತು ಡಿಸಿ ಕಚೇರಿ ಮುಂಭಾಗದಲ್ಲಿ ಪಕ್ಷದ ವತಿಯಿಂದ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಎಚ್ಚರಿಸಿದರು.

ಅವರು ಬಿಜೆಪಿ ಪುತ್ತೂರು ಮಂಡಲ ರೈತ ಮೋರ್ಚಾದ ವತಿಯಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಆಗ್ರಹಿಸಿ ಶುಕ್ರವಾರ ಪುತ್ತೂರು ಮಿನಿವಿಧಾನ ಸೌಧದ ಮುಂಭಾಗದಲ್ಲಿ ನಡೆದ ಧರಣಿಯಲ್ಲಿ ಮಾತನಾಡಿದರು.

ಈಗಾಗಲೇ ನೀರಿನ ಬವಣೆಯಿಂದ ಕಂಗಾಲಾಗಿರುವ ರೈತರು ನೀರಿನ ಸಮಸ್ಯೆಗಳನ್ನು ಪೂರೈಸಿಕೊಳ್ಳಲು ಬೋರ್‌ವೆಲ್ ತೆಗೆಯುವುದಕ್ಕೆ ಸರಕಾರ ತಡೆಯೊಡ್ಡುತ್ತಿರುವುದು ಖಂಡನೀಯ ಎಂದರು.

ರಾಜ್ಯದಲ್ಲಿ ಒಂದೆಡೆ ಪ್ರಾಕೃತಿಕ ಬರವಿದ್ದರೆ ಇನ್ನೊಂದೆಡೆ ಸರಕಾರದಲ್ಲಿ ದುಡ್ಡಿನ ಬರವಿದೆ. ಇದರಿಂದಾಗಿ ಅನ್ನದಾತರಾಗಿರುವ ರೈತರು ಬೀದಿಗಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಹಾಲು ಉತ್ಪಾದಕರಿಗೆ ರೂ. 2 ಪ್ರೋತ್ಸಾಹ ಧನ ನೀಡಿದ್ದರು. ಅದನ್ನು ರೂ.4ಕ್ಕೇರಿಸಿದ ಸಿದ್ದರಾಮಯ್ಯ ಅವರು 8 ತಿಂಗಳಿನಿಂದ ಈ ಹಣವನ್ನು ಬಿಡುಗಡೆ ಮಾಡದೆ ಹೈನುಗಾರರಿಗೆ ವಂಚನೆ ಎಸಗಿದ್ದಾರೆ. ಹಾಲು ಉತ್ಪಾದಕರಿಗೆ 540 ಕೋಟಿ ರೂ. ಬಿಡುಗಡೆಯಾಗಲು ಬಾಕಿಯಾಗಿದೆ. ಗೋಪಾಲಕರ ರಕ್ಷಕ ಎನ್ನುವ ಸಿದ್ದರಾಮಯ್ಯರ ನೈಜ ಬಣ್ಣ ಇದೀಗ ಬಯಲಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ಸಹಕಾರಿ ಸಂಸ್ಥೆಗಳಿಗೆ ಜಮೆ ಮಾಡಲು ಶೆ.3 ಬಡ್ಡಿ ಬಿಡುಗಡೆಮಾಡಿದೆ. ಆದರೆ ರಾಜ್ಯ ಸರಕಾರ ರೈತರ ಖಾತೆಗೆ ಇನ್ನೂ ಜಮೆ ಮಾಡಿಲ್ಲ. ಕೇಂದ್ರ ಬಿಡುಗಡೆಗೊಳಿಸಿರುವ 450 ಕೋಟಿ ರೂ. ಅನುದಾನವನ್ನು ತಕ್ಷಣವೇ ರೈತರ ಸಾಲದ ಖಾತೆಗೆ ಜಮಾ ಮಾಡಬೇಕು. ಪಶು ಆಹಾರ ಕಾರ್ಖಾನೆ ಜಿಲ್ಲೆಯಲ್ಲಿ ಸ್ಥಾಪಿಸಲು ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದ ಅವರು ಆರೋಪಿತ ಸಚಿವರುಗಳನ್ನು ತಮ್ಮ ಸಂಪುಟದಲ್ಲಿರಿಸಿಕೊಂಡಿರುವ ರಾಜ್ಯ ಸರಕಾರ ‘ಐಸಿಯು’ ನಲ್ಲಿದೆ ಎಂದು ವ್ಯಂಗ್ಯವಾಡಿದರು.

ಪ್ರತಿಭಟನಾ ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಕ್ಷೇತ್ರ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಶೈಲಜಾ ಭಟ್, ಯತೀಶ್ ಆರುವಾರು, ಶೈಲಜಾ ಭಟ್, ರಾಜೀವ ಭಂಡಾರಿ, ಸುರೇಶ್ ಆಳ್ವ, ಶಯನಾ ಜಯಾನಂದ, ಸಾಜ ರಾಧಾಕೃಷ್ಣ ಆಳ್ವ, ಮೀನಾಕ್ಷಿ ಮಂಜುನಾಥ, ಆರ್.ಸಿ. ನಾರಾಯಣ, ಚಂದ್ರಶೇಖರ್ ಬಪ್ಪಳಿಗೆ, ರಾಜೇಶ್ ಬನ್ನೂರು, ಕೇಶವ ಪುಯಿಲ, ಅಬ್ದುಲ್ ಕುಂಞಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News