ನಾಳೆ ಮಣಿಪಾಲದಲ್ಲಿ ಕೈ ತೊಳೆಯುವ ರಿಲೇ ಮೂಲಕ ವಿಶ್ವದಾಖಲೆಗೆ ಪ್ರಯತ್ನ

Update: 2016-10-14 13:45 GMT

ಮಣಿಪಾಲ, ಅ.14: ಕೈ ತೊಳೆಯುವ ರಿಲೇ ಕಾರ್ಯಕ್ರಮದ ಮೂಲಕ ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ನಾಳೆ ವಿಶ್ವ ದಾಖಲೆಯೊಂದನ್ನು ಬರೆಯುವ ಪ್ರಯತ್ನ ನಡೆಸಲಿವೆ.

ಅ.15 ವಿಶ್ವ ಕೈ ತೊಳೆಯುವ ದಿನವಾಗಿದ್ದು, ಕೈ ತೊಳೆಯುವ ರಿಲೇ ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ 4,000ಕ್ಕೂ ಅಧಿಕ ಜನರು ಭಾಗವಹಿಸುವ ಮೂಲಕ ವಿಶ್ವ ದಾಖಲೆ ಬರೆಯುವ ಯೋಜನೆ ಇದಾಗಿದೆ ಎಂದು ಕೆಎಂಸಿಯ ಪ್ರಕಟಣೆ ತಿಳಿಸಿದೆ. ‘ಕೈ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಿ!’ ಇದು ಈ ವರ್ಷದ ವಿಶ್ವ ಕೈತೊಳೆಯುವ ದಿನದ ಘೋಷಣಾ ವಾಕ್ಯವಾಗಿದೆ.

ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಮಣಿಪಾಲ ವಿವಿ ಆಡಳಿತಕ್ಕೊಳಪಡುವ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಸಂಸ್ಥೆಗಳು ನಾಳೆ ಮಣಿಪಾಲದ ಮರಿನಾ ಐಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸುವ ಉದ್ದೇಶದಿಂದ ಕೈತೊಳೆಯುವ ರಿಲೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿವೆ.

ರಿಲೇ ಮಾದರಿಯಲ್ಲಿ ನಡೆಯುವ ಇಡೀ ಪ್ರಕ್ರಿಯೆಯಲ್ಲಿ ಭಾಗವಹಿಸುವ ವ್ಯಕ್ತಿಗಳು ಮರಿನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಅಧಿಕೃತ ಅಧಿಕಾರಿಗಳ ಸಮಕ್ಷಮದಲ್ಲಿ ಸಾಕ್ಷಿ ರೂಪದಲ್ಲಿ ಕೈತೊಳೆಯುವ ಚಟುವಟಿಕೆಯನ್ನು ನಡೆಸಲಿದ್ದಾರೆ. ಒಟ್ಟು 4,000 ಮಂದಿ ಈ ಕೈತೊಳೆಯುವ ರಿಲೇಯಲ್ಲಿ ಭಾಗಿಗಳಾಗಲಿದ್ದು, ನಿರಂತರ ರಿಲೇ ಮಾದರಿಯಲ್ಲಿ ನಡೆಯುವ ಈ ಪ್ರಕ್ರಿಯೆಯಲ್ಲಿ ಬಹುಸಂಖ್ಯೆಯ ಜನರು ಸ್ಯಾನಿಟೈಸರ್ (ಕೈ ಸ್ವಚ್ಛಗೊಳಿಸುವ ಸಾಮಗ್ರಿ)ಗಳನ್ನು ಬಳಸಿ ಆರು ವೈಜ್ಞಾನಿಕ ಹಂತಗಳ ಮೂಲಕ ತಮ್ಮ ಕೈಗಳನ್ನು ತೊಳೆಯಲಿದ್ದಾರೆ. ಈ ಮೂಲಕ ಇದೊಂದು ಹೊಸ ವಿಶ್ವ ದಾಖಲೆ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೊದಲ ವಿಶ್ವ ಕೈತೊಳೆಯುವ ದಿನವನ್ನು 2008ರಲ್ಲಿ ಆಚರಿಸಲಾಗಿದ್ದು, ಅಂದು ಜಗತ್ತಿನಾದ್ಯಂತ 70ಕ್ಕಿಂತಲೂ ಹೆಚ್ಚು ರಾಷ್ಟ್ರಗಳ 120 ದಶಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಸಾಬೂನಿನಿಂದ ತಮ್ಮ ಕೈಗಳನ್ನು ತೊಳೆಯುವ ಪ್ರಕ್ರಿಯೆಯಲ್ಲಿ ಭಾಗಿಗಳಾಗಿದ್ದರು. 2008ರ ನಂತರ ಸಾಮುದಾಯಿಕ ಮುಂದಾಳುಗಳು ಮತ್ತು ರಾಷ್ಟ್ರೀಯ ನಾಯಕರು ಕೈತೊಳೆಯುವ,ಸಿಂಕ್‌ಗಳನ್ನು ಕಟ್ಟುವ ಹಾಗೂ ಟಿಪ್ಪಿಟ್ಯಾಪ್‌ಗಳನ್ನು ಅಳವಡಿಸುವ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು, ಜಾಗತಿಕ ಕೈತೊಳೆಯುವ ದಿನವನ್ನು ಬಳಸಿಕೊಳ್ಳುತಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.

ಸ್ವಚ್ಛತೆಯ ಸಂದೇಶವನ್ನು ಸಾರುವುದು ಹಾಗೂ ಪ್ರತಿಯೊಬ್ಬರಲ್ಲೂ ಕೈತೊಳೆಯುವ ಅಭ್ಯಾಸವನ್ನು ಬೆಳೆಸುವುದು ಜಾಗತಿಕ ಕೈ ತೊಳೆಯುವ ದಿನದ ಆಚರಣೆಯ ಉದ್ದೇಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News