ವಿಭಾಗೀಯ ಮಟ್ಟದ ಖೋ ಖೋ ಪಂದ್ಯಾಟ: ಮೈಸೂರು, ಚಾಮರಾಜನಗರ ಜಿಲ್ಲೆಗೆ ಪ್ರಶಸ್ತಿ
ಬ್ರಹ್ಮಾವರ, ಅ.14: ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಮೈಸೂರು ವಿಭಾಗೀಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಹೊನಲು ಬೆಳಕಿನ ಖೋ ಖೋ ಪಂದ್ಯಾಟದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಲಕಿಯರ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆಯ ತಂಡಗಳು ಪ್ರಶಸ್ತಿಯನ್ನು ಗೆದ್ದುಕೊಂಡರೆ, ಪ್ರಾಥಮಿಕ ಬಾಲಕರ ವಿಭಾಗದ ಪ್ರಶಸ್ತಿ ಚಾಮರಾಜನಗರ ಜಿಲ್ಲಾ ತಂಡದ ಪಾಲಾಯಿತು.
ಸಮಾರೋಪ ಸಮಾರಂಭದಲ್ಲಿ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಸಮಾರಂಭದಲ್ಲಿ ರಾಜ್ಯ ಖೋ ಖೋ ಫೆಡರೇಶನ್ ಬ್ರಹ್ಮಾವರ ವಲಯ ಅಧ್ಯಕ್ಷ ಹೆಚ್.ಸುದರ್ಶನ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಹಾರಾಡಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಉಡುಪಿ ಜಿಲ್ಲಾ ಉಪನಿರ್ದೇಶಕ ದಿವಾಕರ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಧುಕರ್ ಎಸ್, ಜಿಪಂ ಕೆಡಿಪಿ ಸದಸ್ಯ ಚೇರ್ಕಾಡಿ ಉಮೇಶ್ ನಾಯ್ಕ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಭುಜಂಗ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್, ಉಪಪ್ರಾಂಶುಪಾಲ ಬಿ.ಟಿ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶ್ಯಾನುಭಾಗ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವಾನಂದ್, ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ನಾಯಕ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಪಿಟಿಎ ಅಧ್ಯಕ್ಷೆ ಪದ್ಮಾವತಿ ಭಟ್, ಸಂಘಟನಾ ಸಮಿತಿಯ ಅಧ್ಯಕ್ಷ ಭಾಸ್ಕರ ರೈ, ಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ಶೆಟ್ಟಿ, ಜಗದೀಶ, ಸ್ವಾಗತ ಸಮಿತಿಯ ಉಪಾಧ್ಯಕ್ಷ ಎಸ್.ನಾರಾಯಣ, ಸೀತಾರಾಮ ಶೆಟ್ಟಿ, ಅಧ್ಯಾಪಕಿ ಸುಶೀಲಾ ಮತ್ತಿತರರು ಉಪಸ್ಥಿತರಿದ್ದರು.