ಕಾಸರಗೋಡು: ಬಾವಿಯಲ್ಲಿ ಬೈಕ್ ಪತ್ತೆ!
ಕಾಸರಗೋಡು, ಅ.14: ಆವರಣವಿಲ್ಲದ ಬಾವಿಯಲ್ಲಿ ಬೈಕೊಂದು ಪತ್ತೆಯಾದ ಘಟನೆ ಪೊಯಿನಾಚಿಯಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಕೊನೆಗೆ ಈ ಬೈಕ್ ಮೂರು ತಿಂಗಳ ಹಿಂದೆ ಬೇಕಲ ಠಾಣಾ ವ್ಯಾಪ್ತಿಯಿಂದ ಕಳವುಗೈದ ಬೈಕ್ ಎಂಬುದಾಗಿ ಖಚಿತವಾಗುವುದರೊಂದಿಗೆ ಸ್ಥಳೀಯರ ಆತಂಕ ದೂರವಾಯಿತು.
ಗುರುವಾರ ಸಂಜೆ ಖಾಸಗಿ ವ್ಯಕ್ತಿಯೋರ್ವರ ಆವರಣವಿಲ್ಲದ ಬಾವಿಯಲ್ಲಿ ಬೈಕ್‌ನ ನಂಬರ್ ಪ್ಲೇಟ್ ಕಂಡುಬಂದಿತ್ತು. ಇದರಿಂದ ಸಂಶಯಗೊಂಡು ಬಾವಿಯಲ್ಲಿ ತಪಾಸಣೆ ನಡೆಸಿದಾಗ ಬೈಕ್ ಕೂಡಾ ಬಿದ್ದಿರುವುದು ಕಂಡುಬಂತು.
ಬಳಿಕ ವಿದ್ಯಾನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ, ಪೊಲೀಸರು ಬೈಕನ್ನು ಬಾವಿಯಿಂದ ಮೇಲಕ್ಕೆತ್ತಿದರು. ಬಳಿಕ ನಂಬರ್ ಪ್ಲೇಟ್ ಪರೀಶೀಲಿಸಿದಾಗ ಮೂರು ತಿಂಗಳ ಹಿಂದೆ ಬೇಕಲದಿಂದ ಕಳವು ಮಾಡಿದ್ದ ಬೈಕ್ ಎಂಬುದಾಗಿ ದೃಢಪಟ್ಟಿತು. ಈ ಕುರಿತು ಬೇಕಲ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು.
ಬೈಕನ್ನು ಕಳವುಗೈದ ಕಳ್ಳರು ದಾರಿ ಮಧ್ಯೆ ಬಾವಿಗೆಸೆದು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಬೈಕ್ ಜೊತೆ ಸವಾರ ಬಾವಿಗೆ ಬಿದ್ದಿರಬಹದು ಎಂಬ ಸಂಶಯ ಉಂಟಾದರೂ ಕೊನೆಗೆ ಬಾವಿಯಲ್ಲಿ ಬೈಕ್ ಮಾತ್ರ ಪತ್ತೆಯಾದುದರಿಂದ ಸ್ಥಳೀಯರು, ಪೊಲೀಸರು ನಿಟ್ಟುಸಿರುಬಿಟ್ಟರು.