×
Ad

ರಶ್ಯದ ಭಾವಾವೇಶದ ಮಾತುಗಳು ಯುದ್ಧದ ಸೂಚನೆಯೇ?

Update: 2016-10-14 20:01 IST

ಮಾಸ್ಕೊ, ಅ. 14: ರಶ್ಯ ಮತ್ತು ಪಶ್ಚಿಮದ ದೇಶಗಳ ನಡುವಿನ ಸಂಬಂಧ ಹಳಸುತ್ತಿರುವಂತೆಯೇ, ಮಾಸ್ಕೊದಲ್ಲಿ ಭಾವಾವೇಶದ ಮಾತುಗಳು ಮುಗಿಲು ಮುಟ್ಟಿವೆ.

ಪರಮಾಣು ದಾಳಿ ನಡೆಸುವುದಾಗಿ ರಶ್ಯದ ಸರಕಾರಿ ಮಾಧ್ಯಮ ಪಶ್ಚಿಮದ ದೇಶಗಳಿಗೆ ಎಚ್ಚರಿಕೆ ನೀಡಿದರೆ, ನಿಶ್ಶಸ್ತ್ರೀಕರಣ ಒಪ್ಪಂದವೊಂದಕ್ಕೆ ಕ್ರೆಮ್ಲಿನ್ ತಡೆಯೊಡ್ಡಿದೆ. ಅದೇ ವೇಳೆ, ಅಮೆರಿಕದ ಜೆಟ್‌ಗಳನ್ನು ಹೊಡೆದುರುಳಿಸುವುದಾಗಿ ರಶ್ಯದ ಸೇನೆ ಎಚ್ಚರಿಸಿದೆ.

‘‘ರಶ್ಯ ಮತ್ತು ಅಮೆರಿಕ ಹಾಗೂ ಒಟ್ಟಾರೆಯಾಗಿ ಪಶ್ಚಿಮದ ದೇಶಗಳ ನಡುವಿನ ಸಂಬಂಧ ತಳ ಮುಟ್ಟಿದೆ. ಇನ್ನು ಇದಕ್ಕಿಂತ ಕೆಳಗೆ ಹೋಗಲು ಸಾಧ್ಯವಿಲ್ಲ’’ ಎಂದು ಮಾಸ್ಕೋದ ರಾಜಕೀಯ ವಿಶ್ಲೇಷಕ ಗುಂಪೊಂದರ ಮುಖ್ಯಸ್ಥರು ಹೇಳಿದ್ದಾರೆ.

ಹಲವಾರು ಸುತ್ತಿನ ಮಾತುಕತೆಗಳ ಬಳಿಕ ರೂಪುಗೊಂಡ ಒಪ್ಪಂದವು ಸಿರಿಯ ಆಂತರಿಕ ಯುದ್ಧವನ್ನು ಕೊನೆಗೊಳಿಸಬಹುದು ಹಾಗು ಯುಕ್ರೇನ್ ವಿಚಾರದಲ್ಲಿ ಮಾಸ್ಕೊ ಮತ್ತು ವಾಶಿಂಗ್ಟನ್‌ಗಳ ನಡುವೆ ಹುಟ್ಟಿಕೊಂಡ ವೈಷಮ್ಯವನ್ನು ತಿಳಿಯಾಗಿಸಬಹುದು ಎಂಬುದಾಗಿ ಭಾವಿಸಲಾಗಿತ್ತು.

 ಆದಾಗ್ಯೂ, ಸಿರಿಯದಲ್ಲಿ ವಿರುದ್ಧ ಬಣಗಳಲ್ಲಿರುವ ಕ್ರೆಮ್ಲಿನ್ ಮತ್ತು ಶ್ವೇತಭವನಗಳು ತಮ್ಮ ವೈರವನ್ನು ತೊರೆಯುವ ಸಾಧ್ಯತೆ ಬಗ್ಗೆ ಹೆಚ್ಚಿನವರು ಸಂಶಯ ಹೊಂದಿದ್ದರು. ಈಗ ಅದೇ ಸಂಭವಿಸಿದೆ.

 ಪಶ್ಚಿಮದ ದೇಶಗಳು ರಶ್ಯದ ವಿರುದ್ಧ ಆಕ್ರಮಣಕಾರಿ ಧೋರಣೆ ತಳೆದರೆ ‘‘ಪರಮಾಣು ಪರಿಣಾಮ’’ವನ್ನು ಎದುರಿಸಬೇಕಾಗುತ್ತದೆ ಎಂದು ರಶ್ಯದ ಸರಕಾರಿ ಟಿವಿಯಲ್ಲಿ ರವಿವಾರದ ಕಾರ್ಯಕ್ರಮವೊಂದನ್ನು ನಡೆಸಿಕೊಡುವ ಕಾರ್ಯಕ್ರಮ ನಿರ್ವಾಹಕ ಡಿಮಿಟ್ರಿ ಕಿಸೆಲ್ಯೊವ್ ಬೆದರಿಕೆ ಹಾಕಿದ್ದಾರೆ.

ಈ ನಡುವೆ, ರಶ್ಯವು ಸಿರಿಯಕ್ಕೆ ನೂತನ ರಕ್ಷಣಾ ಸಲಕರಣೆಗಳನ್ನು ಕಳುಹಿಸಿಕೊಟ್ಟಿದ್ದು, ಸಿರಿಯದ ಆಕಾಶದಲ್ಲಿ ಹಾರುವ ಯಾವುದೇ ಅಪರಿಚಿತ ವಿಮಾನಕ್ಕೆ ‘ಅಚ್ಚರಿ’ ಕಾದಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಹೇಳಿದ್ದಾರೆ.

ರಶ್ಯ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ ಎಂಬ ಸಂದೇಶವನ್ನು ನೀಡುವ ಹಲವು ಘಟನೆಗಳು ನಡೆದ ಬಳಿಕ, ಈ ಎಚ್ಚರಿಕೆ ಹೊರಟಿರುವುದು ಕಾಕತಾಳೀಯವಾದರೂ ಗಂಭೀರವಾಗಿದೆ.

ಸಿರಿಯದಲ್ಲಿ ನಿರಂತರ ಸೇನೆ ನಿಯೋಜನೆಗೆ ಪುಟಿನ್ ಅಸ್ತು
ಸಿರಿಯದಲ್ಲಿ ರಶ್ಯದ ಪಡೆಗಳನ್ನು ಅನಿರ್ದಿಷ್ಟವಾಗಿ ನಿಯೋಜಿಸಲು ಅವಕಾಶ ನೀಡುವ ರಶ್ಯ ಮತ್ತು ಸಿರಿಯಗಳ ನಡುವಿನ ಒಪ್ಪಂದಕ್ಕೆ ರಶ್ಯದ ಅಧ್ಯಕ್ಷ ವ್ಲಾದಿಮರ್ ಪುಟಿನ್ ಶುಕ್ರವಾರ ಅನುಮೋದನೆ ನೀಡಿದ್ದಾರೆ.

ಮಾಸ್ಕೊ ಮತ್ತು ಡಮಾಸ್ಕಸ್ ನಡುವೆ 2015ರ ಆಗಸ್ಟ್‌ನಲ್ಲಿ ಏರ್ಪಟ್ಟ ಒಪ್ಪಂದದ ಪ್ರಕಾರ, ರಶ್ಯ ಹಮೈಮಿಮ್‌ನಲ್ಲಿ ವಾಯು ನೆಲೆ ಸ್ಥಾಪಿಸಬಹುದಾಗಿದೆ. ಈಗ ಅದನ್ನು ಕಾನೂನು ಮಾಡಿ ಪುಟಿನ್ ಅದಕ್ಕೆ ಅಂಕಿತ ಹಾಕಿರುವುದರ ಹಿಂದೆ, ಅದನ್ನು ರಶ್ಯದ ಖಾಯಂ ನೆಲೆಯನ್ನಾಗಿ ಮಾಡಿಕೊಳ್ಳುವ ಇರಾದೆಯಿರಬಹುದು ಎಂದು ಹೇಳಲಾಗಿದೆ.

ಬಂಡುಕೋರರಿಗೆ ಸುರಕ್ಷಿತವಾಗಿ ಹೊರಹೋಗಲು ಅವಕಾಶ
ಸಿರಿಯದ ಮುತ್ತಿಗೆಗೊಳಗಾಗಿರುವ ನಗರ ಅಲೆಪ್ಪೊದ ಪೂರ್ವ ಭಾಗದಿಂದ ಬಂಡುಕೋರರಿಗೆ ತಮ್ಮ ಶಸ್ತ್ರಗಳ ಸಮೇತ ಸುರಕ್ಷಿತವಾಗಿ ಹೊರಹೋಗುವ ಖಾತರಿ ನೀಡಲು ಸಿದ್ಧವಿರುವುದಾಗಿ ರಶ್ಯ ಗುರುವಾರ ಹೇಳಿದೆ.

‘‘ಶಸ್ತ್ರಧಾರಿ ಬಂಡುಕೋರರು ಸುರಕ್ಷಿತವಾಗಿ ಹೊರ ಹೋಗುವ ಹಾಗೂ ನಾಗರಿಕರು ಪೂರ್ವ ಅಲೆಪ್ಪೊದಿಂದ ಹೊರಗೆ ಮತ್ತು ಒಳಗೆ ನಿರಾತಂಕವಾಗಿ ಸಂಚರಿಸುವ ಅವಕಾಶ ನೀಡಲು ಹಾಗೂ ಅಲ್ಲಿ ಮಾನವೀಯ ನೆರವನ್ನು ವಿತರಿಸಲು ನಾವು ಸಿದ್ಧರಾಗಿದ್ದೆವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರಶ್ಯದ ಲೆಫ್ಟಿನೆಂಟ್ ಜನರಲ್ ಸರ್ಗಿ ರುಡ್‌ಸ್ಕೊಯ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News