ಮೂಡುಬಿದಿರೆ: ಪ.ಜಾ.ವಿದ್ಯಾರ್ಥಿಗೆ ನರ್ಸಿಂಗ್ ಸೀಟು ನಿರಾಕರಣೆ ಆರೋಪ

Update: 2016-10-14 14:54 GMT

ಮಂಗಳೂರು, ಅ.14: ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆಯಾಗಿದ್ದರೂ ಮೂಡುಬಿದಿರೆಯ ಕಾಲೇಜೊಂದು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗೆ ಬಿಎಸ್ಸಿ (ನರ್ಸಿಂಗ್)ಕೋರ್ಸ್‌ಗೆ ಸೀಟು ನೀಡಲು ನಿರಾಕರಿಸಿರುವ ಬಗ್ಗೆ ವಿದ್ಯಾರ್ಥಿಯ ಹೆತ್ತವರು ಇಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಸಿದ್ದೇಶ್ವರನದುರ್ಗ ಗ್ರಾಮದ ನಿವಾಸಿ ನರಸಿಂಹಯ್ಯ ಎಂಬವರ ಪುತ್ರ ನಿತಿಶ್ ಕುಮಾರ್ ಎನ್. ಸೀಟು ನಿರಾಕರಿಸಲ್ಪಟ್ಟಿರುವ ವಿದ್ಯಾರ್ಥಿ.

ಈತ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ಚಿತ್ರದುರ್ಗದಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾನೆ.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳಲ್ಲಿ ನಿತಿಶ್ ಕುಮಾರ್ ಕೂಡ ಒಬ್ಬ. ಈತ ಅಕ್ಟೋಬರ್ 7ರಂದು ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಂಡಿದ್ದು, ಮೂಡುಬಿದಿರೆಯ ಕಾಲೇಜೊಂದದರಲ್ಲಿ ಸೀಟು ಹಂಚಿಕೆಯಾಗಿತ್ತು. ಅಲ್ಲದೆ, ಅಕ್ಟೋಬರ್ 14ರಂದು ಮಧ್ಯಾಹ್ನ 2 ಗಂಟೆಯೊಳಗೆ ಸೂಚಿತ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಳ್ಳುವಂತೆ ಯುನಿವರ್ಸಿಟಿಯ ಅಲಾಟ್‌ಮೆಂಟ್ ಪತ್ರದಲ್ಲಿ ಸೂಚಿಸಲಾಗಿತ್ತು. ಅದರಂತೆ ನಿತೀಶ್ ಇಂದು ತನ್ನ ತಂದೆಯೊಂದಿಗೆ ಮೂಡುಬಿದಿರೆಯ ಕಾಲೇಜಿಗೆ ತೆರಳಿದ್ದ. ಆದರೆ, ಅಲ್ಲಿನ ಪ್ರಾಂಶುಪಾಲರು ಸೀಟು ಕೊಡಲು ನಿರಾಕರಿಸಿದ್ದಾರೆ ಎಂದು ನರಸಿಂಹಯ್ಯ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಆಗಮಿಸಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸೀಟು ಕೇಳಲು ಹೋಗಿದ್ದ ನಮ್ಮನ್ನು ಅವಮಾನಿಸಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ನನ್ನ ಮಗನಿಗೆ ಸೀಟು ಅಲಾಟ್ ಆಗಿದ್ದು, ಪ್ರವೇಶ ಕಲ್ಪಿಸುವಂತೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ''ನಿಮ್ಮ ಮಗನಿಗೆ ಕೊಡಲು ನಮ್ಮಲ್ಲಿ ಸೀಟು ಇಲ್ಲ. ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಹಂಚಿಕೆಯಾಗಿರುವ ಐದು ಸೀಟುಗಳನ್ನೂ ಕೊಟ್ಟಾಗಿದೆ'' ಎಂದರು. ಅದಕ್ಕೆ ನಾನು ಅದನ್ನು ಬರವಣಿಗೆಯಲ್ಲಿ ಕೊಡುವಂತೆ ಮನವಿ ಮಾಡಿದೆ. ಇದರಿಂದ ಕುಪಿತರಾದ ಪ್ರಾಂಶುಪಾಲರು ''ನಿಮಗೆ ಸೀಟು ಕೊಡುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ'' ಎಂದು ಜರೆದಿದ್ದಾರೆ ಎಂದು ನರಸಿಂಹಯ್ಯ ಆರೋಪಿಸಿದರು.

ಇದೀಗ ತನ್ನ ಮಗನೊಂದಿಗೆ ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ನಗರ ಜಿಲ್ಲಾಧಿಕಾರಿ ಕಚೇರಿ ಮತ್ತು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ನರಸಿಂಹಯ್ಯ ಡಿಸಿ ಮತ್ತು ಕಮಿಷನರ್‌ಗೆ ಮನವಿ ಸಲ್ಲಿಸಿ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ದಲಿತ ಮುಖಂಡರಾದ ಪಿ.ಕೇಶವ, ನಾಗರಾಜ ಎಸ್., ಜಯರಾಂ, ವಿದ್ಯಾರ್ಥಿ ನಿತೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News