ಸಿಪಿಎಂ ಕಾರ್ಯಕರ್ತ ಮೋಹನ್ ಕೊಲೆ ಪ್ರಕರಣ: ಮೂವರು ಆರೆಸ್ಸೆಸ್ ಕಾರ್ಯಕರ್ತರ ಬಂಧನ

Update: 2016-10-15 03:20 GMT

ಕಾಸರಗೋಡು, ಅ.15: ಸಿಪಿಎಂ ಕಾರ್ಯಕರ್ತ ಮೋಹನ್  ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೆಸ್ಸೆಸ್ ಕಾರ್ಯಕರ್ತರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.

ಬಂಧಿತರನ್ನು ಕೂತುಪರಂಬ ಕುರಿಯಾಡ್ ನ ನವಜೀತ್ (೨೪) ,  ಪಿ.ಕೆ. ರಾಹುಲ್ ( ೨೧) ಮತ್ತು ಎನ್ . ರೂಪೇಶ್ ( ೨೨) ಎಂದು ಗುರುತಿಸಲಾಗಿದೆ  

ಗುರುವಾರ ರಾಹುಲ್ ಮತ್ತು ರೂಪೇಶ್ ನನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ಬಳಿಕ  ಶುಕ್ರವಾರ ಇಬ್ಬರ  ಬಂಧನವನ್ನು ದಾಖಲಿಸಿದ್ದಾರೆ. ಕಣ್ಣೂರು ಆರೆಸ್ಸೆಸ್  ಕಾರ್ಯಾಲಯ ಪರಿಸರದಿಂದ  ಇಬ್ಬರು ಮತ್ತು ನವಜೀತ್ ನನ್ನು  ಆತನ ಮನೆಯಿಂದ  ಬಂಧಿಸಲಾಯಿತು. ವಿಚಾರಣೆ ವೇಳೆ ತಾವು ಕೃತ್ಯ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿ ಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನವಜೀತ್ ಸೂತ್ರಧಾರನಾಗಿದ್ದು , ಈತನೇ ಕೃತ್ಯಕ್ಕೆ ಸಂಚು ರೂಪಿಸಿದ್ದ  ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು  ವಾರಗಳ ಹಿಂದೆ ನವಜೀತ್ ನ ಮೇಲೆ ಸಿಪಿಎಂ ಕಾರ್ಯಕರ್ತರು  ಹಲ್ಲೆ ನಡೆಸಿದ್ದರು. ಈ ದ್ವೇಷವೇ ಮೋಹನ್  ಕೊಲೆಗೆ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಹಂತಕರು ಕೃತ್ಯದ ಸಂದರ್ಭದಲ್ಲಿ ಬಳಸಿದ್ದ  ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ . ಕೃತ್ಯದಲ್ಲಿ ಒಟ್ಟು ಆರು ಮಂದಿ ನೇರವಾಗಿ ಶಾಮೀಲಾಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ಅಕ್ಟೊಬರ್  ೧೨ ರಂದು ಬೆಳಗ್ಗೆ ೧೦:೩೦ ಕ್ಕೆ ಕೂತುಪರಂಬದ ಸಿಪಿಎಂ ಸ್ಥಳೀಯ ಸಮಿತಿ ಕಾರ್ಯದರ್ಶಿಯಾಗಿದ್ದ  ಮೋಹನ್ ರನ್ನು  ಶೇಂದಿ ಅಂಗಡಿಯಲ್ಲಿ ತಂಡವು ಕೊಲೆಗೈದು ಪರಾರಿಯಾಗಿತ್ತು. ಕೃತ್ಯಕ್ಕೆ ಸಂಬಂಧಪಟ್ಟಂತೆ ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಕೂತುಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಉಳಿದ ಆರೋಪಿಗಳ ಪತ್ತೆಗೆ ತನಿಖಾ ತಂಡ ಶೋಧ ನಡೆಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News