ಅಂಚೆ ಕಚೇರಿಗೂ ಧಾನ್ಯಗಳಿಗೂ ಏನು ಸಂಬಂಧ ಗೊತ್ತೇ?
ಹೊಸದಿಲ್ಲಿ, ಅ.15: ಗಂಗಾಜಲ ವಿತರಣೆ ಬಳಿಕ ಅಂಚೆ ಕಚೇರಿಗಳು ಇದೀಗ ಬೇಳೆಕಾಳುಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ನಿರ್ಧರಿಸಿವೆ, ಕೇಂದ್ರೀಯ ದಾಸ್ತಾನಿನಿಂದ ಬೇಳೆಕಾಳುಗಳನ್ನು ಖರೀದಿಸಲು ರಾಜ್ಯಗಳು ಅನಾಸಕ್ತಿ ತೋರಿರುವ ಹಿನ್ನೆಲೆಯಲ್ಲಿ, ಮುಂದಿನ ಕೆಲವೇ ವಾರಗಳಲ್ಲಿ ಈ ಯೋಜನೆಯನ್ನು ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಈಗಾಗಲೇ ಅಂಚೆ ಕಚೇರಿ ಇಲಾಖೆ ಜತೆ ಮಾತುಕತೆ ನಡೆಸಲಾಗಿದ್ದು, ಇದನ್ನು ಆರಂಭಿಸಲು ಅಂಚೆ ಇಲಾಖೆ ಉತ್ಸುಕವಾಗಿದೆ. ಆರಂಭದಲ್ಲಿ ಕಡಲೆಬೇಳೆಯನ್ನು ರಿಯಾಯಿತಿ ದರದಲ್ಲಿ ವಿತರಿಸಲು ನಿರ್ಧರಿಸಲಾಗಿದೆ. ಕೆಲ ಮಳಿಗೆಗಳು ಈಗಲೂ ದುಬಾರಿದರಕ್ಕೆ ಕಡಲೆಬೇಳೆ ಮಾರಾಟ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅಂಚೆ ಕಚೇರಿ ಮೂಲಕ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಖಾತೆ ಕಾರ್ಯದರ್ಶಿ ಹೇಮಾ ಪಾಂಡೆ ತಿಳಿಸಿದರು.
ಗ್ರಾಹಕ ವ್ಯವಹಾರಗಳ ಖಾತೆ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಅಂತರ ಸಚಿವಾಲಯ ಸಮಿತಿಯು, ಇದೀಗ ಅಗತ್ಯವಸ್ತುಗಳ ಬೆಲೆ ಹಾಗೂ ಲಭ್ಯತೆ ಬಗ್ಗೆ ಪರಾಮರ್ಶೆ ನಡೆಸುತ್ತಿದೆ. ರಾಜ್ಯಗಳಲ್ಲಿ ಸರಕಾರಿ ಮಳಿಗೆಗಳ ಕೊರತೆ ಹಿನ್ನೆಲೆಯಲ್ಲಿ ಇವುಗಳ ವಿತರಣೆಗೆ ಅಂಚೆ ಜಾಲವನ್ನು ಬಳಸಿಕೊಳ್ಳಲಾಗುತ್ತಿದೆ.
ಅಂಚೆ ಕಚೇರಿಗಳಲ್ಲಿ ಧಾನ್ಯದ ಪ್ಯಾಕೇಟ್ ಲಭ್ಯವಾಗುವಂತೆ ಮಾಡಲಾಗುವುದು. ದಿಲ್ಲಿಯಲ್ಲಿ ಈಗಾಗಲೇ ಮೊಬೈಲ್ ವ್ಯಾನ್‌ಗಳ ಮೂಲಕ ಎನ್‌ಸಿಸಿಎಫ್‌ನಿಂದ ಬೇಳೆಕಾಳು ಮಾರಾಟ ಮಾಡಲಾಗುತ್ತಿದೆ ಎಂದು ಪಾಂಡೆ ವಿವರಿಸಿದ್ದಾರೆ.