ವಿಮಾನದಲ್ಲಿ ಕಿರುಕುಳ, ಸಮಸ್ಯೆ ಸೃಷ್ಟಿಸುವ ಪ್ರಯಾಣಿಕರಿಗೆ ಕಾದಿದೆ ಭಾರೀ ಶಿಕ್ಷೆ

Update: 2016-10-15 04:25 GMT

ಹೊಸದಿಲ್ಲಿ, ಅ.15: ವಿಮಾನದಲ್ಲಿ ಸಹ ಪ್ರಯಾಣಿಕರಿಗೆ ಕಿರುಕುಳ ನೀಡುವ ಅಥವಾ ಸಮಸ್ಯೆ ಸೃಷ್ಟಿಸಿ ಕಿರಿಕಿರಿ ಉಂಟುಮಾಡುವ ಮೂಲಕ ವಿಮಾನದ ಭದ್ರತೆಗೆ ಅಪಾಯ ತರುವ ಪ್ರಯಾಣಿಕರು ಮುಂದೆಂದೂ ವಿಮಾನ ಹತ್ತದಂತೆ ತಡೆಯುವ ಕಟ್ಟುನಿಟ್ಟಿನ ಶಿಕ್ಷೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ನೋ ಫ್ಲೈ ಲಿಸ್ಟ್‌ನ ತನ್ನದೇ ಅವತರಣಿಕೆಯನ್ನು ಸಿದ್ಧಪಡಿಸಲು ಭಾರತ ಮುಂದಾಗಿದ್ದು, ಇದರ ಅನ್ವಯ, ಇಂಥ ಪ್ರಯಾಣಿಕರಿಗೆ ಭಾರಿ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ. ವಿಮಾನ ಭದ್ರತಾ ವ್ಯವಸ್ಥೆಯ ಸಮಗ್ರ ಪುನರ್ ಪರಿಶೀಲನೆಯ ಅಂಗವಾಗಿ ಈ ಕ್ರಮ ಕೈಗೊಳ್ಳಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಮುಂದಾಗಿದೆ.

ಎಲ್ಲ ವಿಮಾನ ಪ್ರಯಾಣಿಕರಿಗೆ ವಿಮಾನಯಾನದ ಸುರಕ್ಷಿತ ಹಾಗೂ ಸುಖಕರ ಪ್ರಯಾಣದ ದೃಷ್ಟಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ. ಇಂಥ ವಿಮಾನ ಅಪರಾಧಗಳಲ್ಲಿ ಶಿಕ್ಷೆಗೆ ಒಳಗಾಗುವವರನ್ನು ಮುಂದೆ ನಿಷೇಧಿಸುವುದೂ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಹೇಳಿದ್ದಾರೆ.

ನೋ ಫ್ಲೈ ಲಿಸ್ಟ್ ಪರಿಕಲ್ಪನೆಯನ್ನು ಅಮೆರಿಕದಿಂದ ಎರವಲು ಪಡೆಯಲಾಗಿದ್ದು, ಇಲ್ಲಿ ಕೇಂದ್ರ ಸರಕಾರ, ಭಯೋತ್ಪಾದಕರ ಪಟ್ಟಿ ಪರಿಶೀಲನಾ ಕೇಂದ್ರದ ಮೂಲಕ, ವಾಣಿಜ್ಯ ವಿಮಾನಗಳನ್ನು ಇಂಥ ವ್ಯಕ್ತಿಗಳು ಏರದಂತೆ ತಡೆಯುತ್ತದೆ. ಅಮೆರಿಕದಲ್ಲಿ ವಿಮಾನಯಾನ ಕೈಗೊಳ್ಳಲು ಇವರಿಗೆ ಅವಕಾಶ ನೀಡುವುದಿಲ್ಲ. ಇದೇ ಮಾದರಿಯಲ್ಲಿ ಭಾರತದಲ್ಲೂ ಇಂಥ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಸಚಿವರು ವಿವರಿಸಿದರು.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸಂಖ್ಯೆಯ ಪ್ರಯಾಣಿಕರು ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವ ಜತೆಗೆ ಸುರಕ್ಷತೆಗೂ ಅಪಾಯ ತಂದೊಡ್ಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರಕಾರ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News