×
Ad

ಶ್ರೀರಾಮ, ಶ್ರೀಕೃಷ್ಣ ಮಾಂಸಹಾರಿಗಳು: ಸಚಿವ ಪ್ರಮೋದ್

Update: 2016-10-15 10:57 IST

ಉಡುಪಿ, ಅ.15: ಭಾರತದ ಪುರಾಣಗ್ರಂಥ ರಾಮಾಯಣ ಬರೆದ ಬೇಡ ಸಮುದಾಯಕ್ಕೆ ಸೇರಿದ ವಾಲ್ಮೀಕಿ, ಕ್ಷತ್ರೀಯ ಸಮಾಜದ ಶ್ರೀರಾಮ ಮತ್ತು ಶ್ರೀಕೃಷ್ಣ ಮಾಂಸಾಹಾರಿಗಳಾಗಿದ್ದರು. ಈ ಬಗ್ಗೆ ಚರ್ಚೆಗಳು ನಡೆಯಲಿ ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆಯ ಸಹಯೋಗ ದಲ್ಲಿ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸ ಲಾದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ದೇಶದಾದ್ಯಂತ ಆಹಾರ ಪದ್ದತಿಯ ಕುರಿತು ನಡೆಯುತ್ತಿರುವ ಚರ್ಚೆಗೆ ಈ ವಿಚಾರ ಪ್ರಸ್ತುತ. ಈ ಸಂಬಂಧ ಬೇಕಾದಷ್ಟು ವಿದ್ವಾಂಸರುಗಳು ಇದ್ದಾರೆ. ಅವರು ಈ ಕುರಿತು ಚರ್ಚೆ ನಡೆಸಲಿ. ಅದಕ್ಕಾಗಿ ನಾನು ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಹೇಳುತ್ತಿದ್ದೇನೆ ಎಂದರು.

ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಲು ಜಾತಿ ಮುಖ್ಯ ಅಲ್ಲ. ಜಾತಿ ವ್ಯವಸ್ಥೆಯಲ್ಲಿ ಕೆಳವರ್ಗದ ಸಮುದಾಯದಿಂದ ಬಂದವರು ವಾಲ್ಮೀಕಿ ರಾಮಾಯಣದಂತಹ ಮಹಾನ್ ಕಾವ್ಯ ರಚನೆ ಮಾಡಿದರು. ಸಾಧನೆ ಎನ್ನುವುದು ಯಾವುದೇ ವರ್ಗಕ್ಕೆ ಸೀಮಿತವಾಗಿಲ್ಲ ಎಂದು ಅವರು ತಿಳಿಸಿದರು.

ಮಹಾಭಾರತ ರಚಿಸಿದ ವ್ಯಾಸರು ಮದುವೆಯಾಗದ ಮೀನುಗಾರ ಮಹಿಳೆಯ ಪುತ್ರ. ಈ ಕಾಲದಲ್ಲಿ ಅಂತವರು ಇರುತ್ತಿದ್ದರೆ ಸಮಾಜ ಬಹಿಷ್ಕಾರ ಹಾಕುತ್ತಿತ್ತು. ಜಾತಿ ಬಗ್ಗೆ ಮಾತನಾಡುವ ಹಾಗೂ ಪೂಜೆ ಮಾಡುವ ಹಕ್ಕು ತಮಗೆ ಮಾತ್ರ ಎಂದು ಹೇಳಿಕೊಳ್ಳುವವರಿಗೆ ನಮ್ಮ ಪುರಾಣ, ಇತಿಹಾಸಗಳು ಕಣ್ಣು ತೆರೆಸುವ ಕಾರ್ಯ ಮಾಡುತ್ತವೆ ಎಂದು ಸಚಿವರು ಹೇಳಿದರು.

ವಾಲ್ಮೀಕಿ ವ್ಯಕ್ತಿತ್ವ ಮತ್ತು ಜೀವನದ ಕುರಿತು ಮೂಡುಬಿದರೆಯ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣರಾಜ ಕರಬ ಉಪನ್ಯಾಸ ನೀಡಿ, ವಾಲ್ಮೀಕಿ ತನ್ನ ವೈಯಕ್ತಿಕ ಶ್ರಮದ ಮೂಲಕ ಅಸಾಮಾನ್ಯ ಸಾಧನೆ ಮಾಡಿದವರು. ತಳ ಸಮುದಾಯದಿಂದ ಬಂದ ಇವರು, ತಳಸಮು ದಾಯದ ವ್ಯಕ್ತಿಗಳಲ್ಲಿನ ಅಂತ:ಕರಣದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿ ದರು. ಆದುದರಿಂದ ಯಾವುದೇ ವ್ಯಕ್ತಿಯ ಬದುಕನ್ನು ಜಾತಿ ನಿರ್ಧರಿಸ ಬಾರದು ಎಂದು ಹೇಳಿದರು.

ಬುದ್ಧಿಶಕ್ತಿ, ವಿವೇಕ, ಜ್ಞಾನ ಇವು ಯಾರ ಸೊತ್ತು ಅಲ್ಲ. ಪ್ರತಿಯೊಬ್ಬರ ಆಂತರ್ಯದಲ್ಲೂ ಅಸಾಮಾನ್ಯ ಶಕ್ತಿ ಇರುತ್ತದೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವಂತಹ ಪರಿಸರ ನಿರ್ಮಾಣ ವಾಗಬೇಕು. ಕ್ರಿ.ಪೂ.ಸುಮಾರು 2 ಅಥವಾ 3 ನೇ ಶತಮಾನದಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಗ್ರಂಥವು ಕೇವಲ ಪೌರಾಣಿಕ ಕಥೆಗಳನ್ನು ಮಾತ್ರ ಒಳಗೊಳ್ಳದೆ ನೈತಿಕ ವೌಲ್ಯಗಳನ್ನು ಸಾರುವ, ಸಾಮಾಜಿಕ ವ್ಯವಸ್ಥೆ ಯನ್ನು ಉತ್ತಮಗೊಳಿಸುವ ಗ್ರಂಥವಾಗಿದೆ ಎಂದರು.

ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದಲ್ಲಿ ಎಸ್ಸೆಸೆಲ್ಸಿಯಲ್ಲಿ ಪ್ರಥಮ ಬಾರಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ, ಸರಳ ವಿವಾಹ ವಾದ ದಂಪತಿಗಳಿಗೆ ಸಹಾಯಧನ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅಪರ ಜಿಲ್ಲಾಧಿಕಾರಿ ಅನುರಾಧ, ತಹಶಿಲ್ದಾರ್ ಮಹೇಶ್ಚಂದ್ರ ಉಪಸ್ಥಿತರಿದ್ದರು.

ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಹರೀಶ್ ಗಾಂವ್ಕರ್ ಸ್ವಾಗತಿಸಿದರು. ಅಧೀಕ್ಷಕ ವಿಶ್ವನಾಥ್ ವಂದಿಸಿದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News