ಮುಝಫ್ಫರಪುರ ಕೇಂದ್ರೀಯ ವಿದ್ಯಾಲಯದಲ್ಲಿ ರ‍್ಯಾಗಿಂಗ್: ಸಹೋದರರ ವಿರುದ್ಧ ಎಫ್ ಐಆರ್

Update: 2016-10-15 06:17 GMT

ಮುಝಫ್ಪರಪುರ, ಅ.15: ಸಹಪಾಠಿಯೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಮೇಲೆ ಇಲ್ಲಿನ ಕೇಂದ್ರೀಯ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಇಬ್ಬರು ಆರೋಪಿಗಳೂ ಸಹೋದರರಾಗಿದ್ದಾರೆ. ಅವರು ನಡೆಸಿದ ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಯಿತು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ ಅವರ ನಿರ್ದೇಶನದಂತೆ ಕೇಂದ್ರೀಯ ವಿದ್ಯಾಲಯದ ನಾಲ್ಕು ಸದಸ್ಯರ ತಂಡವು ಶಾಲೆಗೆ ಭೇಟಿ ನೀಡಿ ಘಟನೆಯ ತನಿಖೆ ನಡೆಸಿತು. ಇದಕ್ಕೂ ಮುಂಚೆ ಕೇಂದ್ರೀಯ ವಿದ್ಯಾಲಯ ಗನ್ನಿಪುರ್, ಮುಝಫರಪುರ ಇಲ್ಲಿನ ಪ್ರಿನ್ಸಿಪಾಲ್‌ ರಾಜೀವ್ ರಂಜನ್ ಪೊಲೀಸ್ ದೂರು ದಾಖಲಿಸಿದ್ದರು.

ಆರೋಪಿ ವಿದ್ಯಾರ್ಥಿಗಳಲ್ಲೊಬ್ಬರು 12 ನೇ ತರಗತಿ ವಿದ್ಯಾರ್ಥಿಯಾಗಿದ್ದರೆ, ಇನ್ನೊಬ್ಬ 11 ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಅವರಿಬ್ಬರೂ ಸಂತ್ರಸ್ತ 12ನೆ ತರಗತಿಯ ವಿದ್ಯಾರ್ಥಿಯನ್ನು ಇತರ ಸಹಪಾಠಿಗಳ ಸಮ್ಮುಖದಲ್ಲಿ ದೂಡಿ ಹಲ್ಲೆ ನಡೆಸುವುದು ವೀಡಿಯೋದಲ್ಲಿ ದಾಖಲಾಗಿದೆ. ಘಟನೆ ಸೆಪ್ಟೆಂಬರ್ 25 ರಂದು ನಡೆದಿದೆ.

ಇಬ್ಬರು ಆರೋಪಿ ವಿದ್ಯಾರ್ಥಿಗಳೂ ತಲೆಮರೆಸಿಕೊಂಡಿರುವ ಕ್ರಿಮಿನಲ್ ಒಬ್ಬನ ಸಂಬಂಧಿಗಳು ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News