ಕಾನ್ಸಾಸ್ ಗಾರ್ಡನ್ ಸಿಟಿಯಲ್ಲಿ ಮುಸ್ಲಿಮರ ವಿರುದ್ಧ ಬಾಂಬ್ ದಾಳಿಗೆ ಸಂಚು: ಮೂವರ ಬಂಧನ

Update: 2016-10-15 08:02 GMT

ಕಾನ್ಸಾಸ್, ಅ.15: ಸೊಮಾಲಿ ವಲಸಿಗರು ವಾಸಿಸುತ್ತಿರುವ ಪಶ್ಚಿಮ ಕಾನ್ಸಾಸ್ ನ ಗಾರ್ಡನ್ ಸಿಟಿಯ ಅಪಾರ್ಟುಮೆಂಟ್ ಕಾಂಪ್ಲೆಕ್ಸ್ ಒಂದರ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ನಡೆಸಿದ್ದಾರೆನ್ನಲಾದ ಕಾನ್ಸಾಸ್ ತೀವ್ರಗಾಮಿಗಳ ಗುಂಪಿನ ಮೂರು ಮಂದಿ ಸದಸ್ಯರನ್ನು ಶುಕ್ರವಾರ ಬಂಧಿಸಲಾಗಿದೆ. ನವೆಂಬರ್ ತಿಂಗಳಲ್ಲಿ ನಡೆಯುವ ಚುನಾವಣೆಯ ನಂತರ ಈ ಬಾಂಬ್ ದಾಳಿ ನಡೆಸಲು ಯೋಜಿಸಲಾಗಿತ್ತೆಂದು ತಿಳಿದು ಬಂದಿದೆ.

ಎಂಟು ತಿಂಗಳು ಕಾಲ ನಡೆದ ಎಫ್ ಬಿ ಐ ತನಿಖೆಯ ನಂತರ ಈ ಬಂಧನ ನಡೆದಿದೆ. ಬಂಧಿತರನ್ನುಕರ್ಟಿಸ್ ವೇನ್ ಅಲ್ಲೆನ್ (49),ಪ್ಯಾಟ್ರಿಕ್ ಯುಜೀನ್ ಸ್ಟೀನ್ (47) ಮತ್ತು ಗವಿನ್ ವೇನ್ ರೈಟ್ (49) ಎಂದು ಗುರುತಿಸಲಾಗಿದೆ.

ಕ್ರುಸೇಡರ್ಸ್ ಎಂಬ ಹೆಸರಿನ ಉಗ್ರಗಾಮಿ ಸಂಘಟನೆಯ ಸದಸ್ಯರು ಅವರೆಂದು ಹೇಳಲಾಗಿದ್ದು ಅವರು ಸರಕಾರ ವಿರೋಧಿ, ಮುಸ್ಲಿಂ ವಿರೋಧಿ ಹಾಗೂ ವಲಸಿಗ ವಿರೋಧಿ ಭಾವನೆಗಳನ್ನು ಹೊಂದಿದ್ದಾರೆನ್ನಲಾಗಿದೆ. ಈ ಸಂಘಟನೆ ಉಗ್ರವಾದಿ ಕೃತ್ಯಗಳಲ್ಲಿ ತೊಡಗಿದೆಯೇ ಎಂಬ ಬಗೆಗಿನ ತನಿಖೆಯನ್ನು ಎಫ್ ಬಿ ಐ ಫೆಬ್ರವರಿ ತಿಂಗಳಲ್ಲಿ ಕೈಗೆತ್ತಿಕೊಂಡಿದ್ದು ಕಾನ್ಸಾಸ್ ನಲ್ಲಿ ನಡೆದ ಸಂಘಟನೆಯ ಸಭೆಗಳಲ್ಲಿ ವಿಶ್ವಾಸನೀಯ ಮೂಲವೊಂದು ಕೂಡ ಭಾಗವಹಿಸಿತ್ತೆನ್ನಲಾಗಿದೆ.

ಜೂನ್ ತಿಂಗಳಲ್ಲಿ ನಡೆದ ಸಂಘಟನೆಯ ಸಭೆಯೊಂದರಲ್ಲಿ ಸ್ಟೀನ್, ಒರ್ಲಾಂಡೋ ನೈಟ್ ಕ್ಲಬ್‌ ಶೂಟಿಂಗ್ ಮಾದರಿಯ ದಾಳಿಯನ್ನು ಗಾರ್ಡನ್ ಸಿಟಿಯ ಮುಸ್ಲಿಂ ವಲಸಿಗರ ಮೇಲೆ ನಡೆಸುವ ಪ್ರಸ್ತಾಪ ಮಾಡಿದ್ದನೆಂದು ಹೇಳಲಾಗಿದೆ. ಅಲ್ಲಿ ಹೆಚ್ಚಿನ ಸಂಖ್ಯೆಯ ಸೊಮಾಲಿಗಳು ವಾಸಿಸುತ್ತಿರುವುದರಿಂದ ಹಾಗೂ ಅಲ್ಲಿನ ಅಪಾರ್ಟುಮೆಂಟ್ ಒಂದನ್ನು ಮಸೀದಿಯಾಗಿ ಪರಿವರ್ತಿಸಿದ್ದರಿಂದ ದಾಳಿ ನಡೆಸಲು ಯೋಜಿಸಲಾಗಿತ್ತು ಎಂದು ವರದಿಯೊಂದು ತಿಳಿಸಿದೆ.

ರಕ್ತದೋಕುಳಿಯಿಂದ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯವೆಂದೂ ಆತ ಹೇಳಿಕೊಂಡಿದ್ದನೆನ್ನಲಾಗಿದೆ. ಗಾರ್ಡನ್ ಸಿಟಿಯಲ್ಲಿ ಟೈಸನ್ ಫುಡ್ಸ್ ಕಸಾಯಿಖಾನೆಯಿರುವ ಕಾರಣ ಅಲ್ಲಿ ವಲಸಿಗರು ಹೆಚ್ಚಾಗಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News