ಜಿಲ್ಲಾಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

Update: 2016-10-15 13:09 GMT

ಮಂಗಳೂರು,ಅ.15: ಶೋಷಿತ ಸಮುದಾಯಕ್ಕೆ ಸೇರಿದ ವಾಲ್ಮೀಕಿ ಸರ್ವ ಕಾಲಕ್ಕೂ ಸಲ್ಲುವಂಥ ಮಹಾಗ್ರಂಥ ರಾಮಾಯಣ ಬರೆದವರು. ಸಾಮಾಜಿಕ ನ್ಯಾಯದಿಂದ ವಂಚಿತರಾದ ಈ ಸಮುದಾಯದ ಸ್ವಾಭಿಮಾನದ ಬದುಕನ್ನು ಬಲಿಷ್ಠಗೊಳಿಸಲು ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತ, ಜಿ.ಪಂ., ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ವಾಲ್ಮೀಕಿ ನಾಯಕ ಅಸೋಸಿಯೇಶನ್ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿಯ ಬಜೆಟ್‌ನಲ್ಲಿ ವಾಲ್ಮೀಕಿ ಜನಾಂಗದ ಅಭಿವೃದ್ಧಿಗಾಗಿ ದೊಡ್ಡ ಮೊತ್ತದ ಅನುದಾನ ಮೀಸಲಿಡಲಾಗಿದೆ. ಈ ಅನುದಾನ ಖರ್ಚಾಗದಿದ್ದರೆ ವಾಪಸ್ ಹೋಗುವುದಿಲ್ಲ. ಮುಂದಿನ ವರ್ಷಕ್ಕೆ ಅದನ್ನು ಬಳಕೆ ಮಾಡಬಹುದು ಎಂದರು.

ಪ್ರಧಾನ ಭಾಷಣ ಮಾಡಿದ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಕೆ. ಮೀನಾಕ್ಷಿ, ಸದ್ಗುಣ, ತ್ಯಾಗ, ಪ್ರಜಾಪ್ರೀತಿ, ಸ್ವಾರ್ಥರಹಿತ ಬದುಕಿನ ವೌಲ್ಯಗಳನ್ನು ಇಟ್ಟುಕೊಂಡು ವಾಲ್ಮೀಕಿ ರಾಮಾಯಣ ರಚನೆ ಮಾಡಿದ. ಶ್ರೀರಾಮನಲ್ಲಿ ಈ ಎಲ್ಲ ವೌಲ್ಯಗಳನ್ನು ತುಂಬಿದ. ಪ್ರಕೃತಿಯೊಂದಿಗಿನ ಸಹಚರ್ಯೆ ವಾಲ್ಮೀಕಿಗೆ ಇದನ್ನು ಸಾಧ್ಯವಾಗಿಸಿತು ಎಂದು ಹೇಳಿದರು.

ತ್ಯಾಗ ಪ್ರಕೃತಿಯ ಸಹಜಗುಣ. ಪ್ರಕೃತಿಯ ಮಡಿಲಿನಲ್ಲಿ ಬೆಳೆಯುತ್ತ ಶಸ್ತ್ರ, ಶಾಸ್ತ್ರಗಳನ್ನು ಕಲಿತು ರಾಮ ಮಾನವತೆಯಿಂದ ದೈವತ್ವಕ್ಕೇರಿದ. ರಾಮಾಯಣದಲ್ಲಿ ಬರುವ ದುಷ್ಟ ಸಂಹಾರ ಕೇವಲ ಸಾಂಕೇತಿಕ ಮಾತ್ರ. ಮನಸ್ಸಿನಲ್ಲಿ ದಾನವತ್ವ ಮತ್ತು ಮಾನವತ್ವ ಎರಡೂ ಇರುತ್ತದೆ. ಕೊನೆಗೆ ಮಾನವತೆಯೇ ಮೇಲ್ಮೆಯಾಗುತ್ತದೆ. ರಾಮ ಪ್ರಕೃತಿಯಿಂದ ಕಲಿತಾಗ ಆದರ್ಶದ ಮನೋಭಾವ ಮೈಗೂಡಿಸಿಕೊಳ್ಳಲು ಸಾಧ್ಯವಾಯಿತು. ಪ್ರಕೃತಿಯೊಳಗೆ ಒಂದಾಗುವ ಈ ಪ್ರಕ್ರಿಯೆ ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ ಎಂದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಮೊಯ್ದೀನ್ ಬಾವ ,ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ, ದ.ಕ. ವಾಲ್ಮೀಕಿ ನಾಯಕ ಎಸೋಸಿಯೇಶನ್ ಅಧ್ಯಕ್ಷ ಹಾಲೇಶಪ್ಪ, ಜಿ.ಪಂ. ಉಪಕಾರ್ಯದರ್ಶಿ ಉಮೇಶ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಬಿ.ಎಸ್. ಹೇಮಲತಾ, ಜಿ.ಪಂ. ಸದಸ್ಯ ಶಾಹುಲ್ ಹಮೀದ್, ಪಾಲಿಕೆಯ ಉಪ ಆಯುಕ್ತ ಗೋಕುಲ್‌ದಾಸ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News