ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಎಸ್‌ಪ್ಲೋರಾರೆ’ ಉದ್ಘಾಟನೆ

Update: 2016-10-15 09:36 GMT

ಮಂಗಳೂರು, ಅ.15: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜು ವತಿಯಿಂದ ನಗರದ ಕಂಕನಾಡಿಯ ಫಾದರ್ ಮುಲ್ಲರ್ ದಶಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಶನಿವಾರ ಹೋಮಿಯೋಪಥಿ ಮತ್ತು ವಿಶೇಷತೆ ಬಗ್ಗೆ ನಡೆದ 20ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಎಸ್‌ಪ್ಲೋರಾರೆ’ ಉದ್ಘಾಟನೆಗೊಂಡಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ನಿರ್ದೇಶಕ, ಧರ್ಮಗುರು ಪ್ಯಾಟ್ರಿಕ್ ರಾಡ್ರಿಗಸ್, ಹೋಮಿಯೋಪಥಿ ವೈದ್ಯಕೀಯ ಪದ್ಧತಿಯಲ್ಲಿ ಜಟಿಲವಾದ, ಗಂಭೀರ ರೋಗಗಳಿಗೂ ಔಷಧಿ ನೀಡಿ ಗುಣಪಡಿಸಬಹುದು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿಶ್ವಾಸ ಮೂಜಿಸುವ ಕೆಲಸವಾಗಬೇಕು ಎಂದು ಅವರು ಹೇಳಿದರು.

ಹೋಮಿಯೋಪಥಿ ಔಷಧದ ವೈಜ್ಞಾನಿಕತೆ ಬಗ್ಗೆ ಜನರು ಪ್ರಶ್ನಿಸುತ್ತಾರೆ. ಹಾಗಾಗಿ ಹೋಮಿಯೋಪಥಿ ಪದವಿ ಪಡೆದವರು ಈ ಬಗ್ಗೆ ಆಳವಾದ ಅಧ್ಯಯನ ನಡೆಸಿ, ವಿಶ್ಲೇಷಣೆಗಳ ಮೂಲಕ ಸಂಶೋಧನೆಗಳ ಮೂಲಕ ಜನರಿಗೆ ಮನವರಿಕೆ ಮಾಡುವ ಕಾರ್ಯ ಮಾಡಬೇಕು ಎಂದವರು ಹೇಳಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೋಪಥಿ ಸದಸ್ಯ ಡಾ. ಪಿ. ಸಂಪತ್ ರಾವ್, ಶಿಕ್ಷಣ ನಿರಂತರ ಪ್ರಕ್ರಿಯೆ. ಹೋಮಿಯೋಪಥಿ ಕ್ಷೇತ್ರದ ನೂತನ ಆವಿಷ್ಕಾರ ಮತ್ತು ಬೆಳವಣಿಗೆ ತಿಳಿದುಕೊಳ್ಳಲು ಇಂತಹ ಸಮ್ಮೇಳನ ಅಗತ್ಯ. ವಿದ್ಯಾರ್ಥಿಗಳು ತಾವು ಕಲಿತದ್ದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ಅದರಿಂದ ಜನರಿಗೆ ಉಪಯೋಗ ಆಗುವಂತೆ ನೋಡಿಕೊಳ್ಳಬೇಕು ಎಂದರು.

ಕಾಲೇಜಿನ ಆಡಳಿತಾಧಿಕಾರಿ ಧರ್ಮಗುರು ವಿನ್ಸೆಂಟ್ ವಿನೋದ್ ಸಲ್ದಾನಾ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಶಿವಪ್ರಸಾದ್ ಕೆ. ಅತಿಥಿ ಪರಿಚಯ ಮಾಡಿದರು. ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಶ್ರೀನಾಥ್ ರಾವ್ ವಂದಿಸಿದರು. ಡಾ. ಕುರಿಯನ್, ಡಾ. ರಶೆಲ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News