ಸರಕಾರ ಬಿಜೆಪಿಯಿಂದ ಕಲಿಯಬೇಕಾದದ್ದು ಏನೂ ಇಲ್ಲ : ವೆಂಕಪ್ಪ ಗೌಡ
ಸುಳ್ಯ, ಅ.15: ಪ್ರತೀ ಲೀಟರ್ ಹಾಲಿಗೆ 4 ರೂ. ಪರಿಹಾರ ಧನವನ್ನು ಘೋಷಣೆ ಮಾಡಿ ಅಂತಹ ರೈತರಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಪಶುಭಾಗ್ಯ ಯೋಜನೆಯ ಅಡಿಯಲ್ಲಿ ನೀಡಿದ ಕರ್ನಾಟಕ ಸರಕಾರಕ್ಕೆ ಬಿಜೆಪಿಯಿಂದ ಕಲಿಯಬೇಕಾದದ್ದು ಏನೂ ಇಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪಗೌಡ ಹೇಳಿದ್ದಾರೆ.
ಯೋಜನೆಯನ್ನು ಘೋಷಣೆ ಮಾಡಿದ ಹಣವನ್ನು ವಿತರಣೆ ಮಾಡಲು ಕರ್ನಾಟಕ ಸರಕಾರಕ್ಕೆ ಚೆನ್ನಾಗಿ ತಿಳಿದಿದೆ. ಕಾಂಗ್ರೆಸ್ ಸರಕಾರ ಹಿಂದಿನ ಸರಕಾರದಂತೆ ಮೋಜು ಮಸ್ತಿಯ ಹೆಸರಿನಲ್ಲಿ ದುಂದು ವೆಚ್ಚವನ್ನು ಮಾಡುವ ಯಾವುದೇ ಕೆಟ್ಟ ಚಾಳಿಯನ್ನು ಹೊಂದಿಲ್ಲ. ಹಾಲು ಉತ್ಪಾದಕರಿಗೆ ಸಬ್ಸಿಡಿ ಬಿಡುಗಡೆ ಆಗ್ರಹಿಸಿದ ಬಿಜೆಪಿ, ಕರ್ನಾಟಕದ ಕಾಂಗ್ರೆಸ್ ಸರಕಾರ 150 ಕೋಟಿ ರೂ.ಗಿಂತಲೂ ಹೆಚ್ಚಿನ ಅನುದಾನದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಕೊಯ್ಲದಲ್ಲಿ ಪಶುವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆಯನ್ನು ಮಾಡಿರುವುದನ್ನು ಸ್ವಾಗತಿಸಿದರೆ ಬಿಜೆಪಿ ಅಭಿವೃದ್ಧಿಯ ಪರ ಎಂದು ಹೇಳಬಹುದಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.