×
Ad

ಉಡುಪಿ ಮಠಕ್ಕೆ ಮುತ್ತಿಗೆ ಹಾಕಿದರೆ ಸೂಕ್ತ ಪ್ರತ್ಯುತ್ತರ: ಎಂ.ಬಿ. ಪುರಾಣಿಕ್

Update: 2016-10-15 19:33 IST

ಮಂಗಳೂರು, ಅ.15: ವಿಚಾರವಾದಿಗಳು ಉಡುಪಿ ಮಠಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರೆ ಹಿಂದೂ ಸಮಾಜ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಪ್ರತಿಕ್ರಿಯಿಸಿದ್ದಾರೆ.

ಕದ್ರಿಯ ವಿಎಚ್‌ಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಹಿಂದೂ ಸಮಾಜ ಮಾತ್ರವಲ್ಲದೆ ಎಲ್ಲರೂ ಗೌರವಿಸುತ್ತಾರೆ. ಅಂತಹ ಮೇರು ವ್ಯಕ್ತಿತ್ವದ ಸ್ವಾಮೀಜಿ ವಿರುದ್ಧ ವಿಚಾರವಾದಿಗಳು ಹೀನಾಯವಾಗಿ ಹೇಳಿಕೆ ನೀಡಿರುವುದು ಖಂಡನೀಯ. ಈ ಹೇಳಿಕೆ ವಿರುದ್ಧ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ದೇಶಾದ್ಯಂತ ನಡೆದಾಡುವ ಸಂತರೆಂದೇ ಕರೆಯಲಾಗುವ ಪೇಜಾವರ ಮಠಾಧೀಶರು, ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆ ಮೂಡಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಶ್ರೀಗಳು 45 ವರ್ಷಗಳ ಹಿಂದೆಯೇ ಉಪೇಕ್ಷಿತ ಬಂಧುಗಳ ಮನೆಗೆ ಭೇಟಿ ನೀಡಿ, ಅವರಿಗೆ ಮಂತ್ರ ದೀಕ್ಷೆ ನೀಡುವುದರ ಜತೆಗೆ ಮಠ ಮಂದಿರಗಳಲ್ಲಿ ಮುಕ್ತ ಅವಕಾಶ ದೊರೆಯುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಪೇಜಾವರ ಶ್ರೀಗಳ ಬಗ್ಗೆ ವಿಚಾರವಾದಿಗಳಿಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಕೃಷ್ಣಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂಬ ಹೇಳಿಕೆಯನ್ನು ನೀಡಿರುವ ವಿಚಾರವಾದಿಗಳ ನಿಲುವನ್ನು ವಿಹಿಂಪ ಮತ್ತು ಬಜರಂಗದಳ ಖಂಡಿಸುತ್ತದೆ ಎಂದವರು ಹೇಳಿದರು.

ಉಡುಪಿ ಪುಣ್ಯ ಕ್ಷೇತ್ರ, ಅದು ಯಾವ ಕಾಲಕ್ಕೂ ಮಲಿನವಾಗಲು ಸಾಧ್ಯವಿಲ್ಲ. ಆದುದರಿಂದ ಉಡುಪಿಯನ್ನು ಸ್ವಚ್ಛ ಮಾಡುವ ಬಗ್ಗೆ ಸಂಘಟನೆಗಳ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಪುರಾಣಿಕ್ ಹೇಳಿದರು.

ಆಡಳಿತ ನೇಮಕಕ್ಕೆ ವಿರೋಧ: ರಾಜ್ಯ ಸರಕಾರ ಗೋಕರ್ಣ ಮಠಕ್ಕೆ ವಿಶೇಷ ಆಡಳಿತಾಧಿಕಾರಿ ನೇಮಕಕ್ಕೆ ಚಿಂತನೆ ನಡೆಸುತ್ತಿದ್ದು, ಇದು ಖಂಡನೀಯ. ಮಠದ ಬಗ್ಗೆ ಮೂರು ತೂರಿಸುವ ಪ್ರಯತ್ನ ಬೇಡ. ಇದನ್ನು ವಿಎಚ್‌ಪಿ ಖಂಡಿಸುತ್ತದೆ ಎಂದು ಪುರಾಣಿಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್, ವಿಹಿಂಪ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಉಪಾಧ್ಯಕ್ಷ ವಾಸುದೇವ ಗೌಡ, ಜತೆ ಕಾರ್ಯದರ್ಶಿ ಶಿವಾನಂದ ಮೆಂಡನ್, ದಿನೇಶ್ ಪೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News