ಹೆರಿಗೆ ವೇಳೆ ಮಗು ಮೃತ್ಯು : ವೈದ್ಯರ ನಿರ್ಲಕ್ಷ್ಯ ಆರೋಪ
Update: 2016-10-15 20:00 IST
ಉಡುಪಿ, ಅ.15: ನಗರದ ಕೆ.ಎಂ.ಮಾರ್ಗದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಶನಿವಾರ ಹೆರಿಗೆ ಸಂದರ್ಭದಲ್ಲಿ ಮಗುವೊಂದು ಮೃತಪಟ್ಟಿದ್ದು, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
9 ತಿಂಗಳ ತುಂಬು ಗರ್ಭಿಣಿ ಪೆರ್ಡೂರಿನ ಮನೋಹರ್ ಕುಲಾಲ್ ಎಂಬವರ ಪತ್ನಿ ನಳಿನಿ ಕುಲಾಲ್ (28) ಎರಡು ದಿನಗಳ ಹಿಂದೆ ಪ್ರಥಮ ಹೆರಿಗೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ನಸುಕಿನ ವೇಳೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಯ ದಾದಿಯರು ಸಾಮಾನ್ಯ ಹೆರಿಗೆ ಮಾಡಲು ಯತ್ನಿಸಿದ್ದು, ಈ ವೇಳೆ ಗಂಡು ಮಗು ಮೃತಪಟ್ಟಿದೆ. ಈ ಮಗು 3.5ಕೆ.ಜಿ. ತೂಕ ಇತ್ತು.
‘ಆಸ್ಪತ್ರೆಯ ದಾದಿಯರ ನಿರ್ಲಕ್ಷ್ಯ ಹಾಗೂ ವೈದ್ಯರು ಬರಲು ತಡವಾದ ಪರಿಣಾಮ ಮಗು ಹೆರಿಗೆ ವೇಳೆ ಮೃತಪಟ್ಟಿದೆ. ನಮಗೆ ನ್ಯಾಯ ಬೇಕು. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ದೂರು ನೀಡಲಾಗುವುದು’ ಎಂದು ಮೃತ ಮಗುವಿನ ತಂದೆ ಮನೋಹರ್ ತಿಳಿಸಿದ್ದಾರೆ.