ಮಣಿಪಾಲದಲ್ಲಿ ಗಿನ್ನೆಸ್ ವಿಶ್ವ ದಾಖಲೆಗೊಂದು ಪ್ರಯತ್ನ

Update: 2016-10-15 15:34 GMT

ಮಣಿಪಾಲ, ಅ.15: ಮಣಿಪಾಲ ವಿವಿ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳ ಸಂಘಸಂಸ್ಥೆಗಳ ಸಾವಿರಾರು ಮಂದಿ ವಿದ್ಯಾರ್ಥಿಗಳು, ದಾದಿಯರು ಹಾಗೂ ವೈದ್ಯರು ಕೈ ತೊಳೆಯುವ ರಿಲೇ ಕಾರ್ಯಕ್ರಮದ ಭಾಗವಹಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವ ದಾಖಲೆಯೊಂದನ್ನು ಬರೆಯುವ ಪ್ರಯತ್ನದಲ್ಲಿ ಸಹಭಾಗಿಗಳಾದರು.

ಬೆಳಗ್ಗೆ 7ಗಂಟೆಗೆ ಪ್ರಾರಂಭಗೊಂಡ ವೈಜ್ಞಾನಿಕವಾಗಿ ಕೈ ತೊಳೆಯುವ ಆರು ಹಂತದ ಈ ರಿಲೇ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಯವರೆಗೆ 2,500 ಮಂದಿ ಭಾಗಿಯಾಗಿದ್ದು, ಒಟ್ಟು 5,500 ಮಂದಿ ಇದಕ್ಕಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಈ ಕಾರ್ಯಕ್ರಮ ರಾತ್ರಿ 11-12ಗಂಟೆಯ ವರೆಗೂ ಮುಂದುವರಿಯುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇಂದು (ಅ.15) ವಿಶ್ವ ಕೈ ತೊಳೆಯುವ ದಿನವಾಗಿದ್ದು, ‘ಕೈ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಿ!’ ಇದು ಈ ವರ್ಷದ ವಿಶ್ವ ಕೈತೊಳೆಯುವ ದಿನದ ಘೋಷಣಾ ವಾಕ್ಯವಾಗಿದೆ. ಸ್ವಚ್ಛತೆಯ ಸಂದೇಶವನ್ನು ಸಾರುವುದು ಹಾಗೂ ಪ್ರತಿಯೊಬ್ಬರಲ್ಲೂ ಕೈತೊಳೆಯುವ ಅಭ್ಯಾಸವನ್ನು ಬೆಳೆಸುವುದು ಜಾಗತಿಕ ಕೈ ತೊಳೆಯುವ ದಿನದ ಆಚರಣೆಯ ಉದ್ದೇಶವಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ.(ಕರ್ನಲ್) ಎಂ.ದಯಾನಂದ್ ಸುದ್ದಿಗಾರರಿಗೆ ತಿಳಿಸಿದರು.

ಸ್ವಚ್ಛತೆಯ ಕೊರತೆ ಹಾಗೂ ಶುದ್ಧವಾಗಿ ಕೈ ತೊಳೆಯುವ ಅಭ್ಯಾಸವಿಲ್ಲದ ಕಾರಣ ಭಾರತದ ಆಸ್ಪತ್ರೆಗಳಲ್ಲಿ ಪ್ರತಿವರ್ಷ 90,000 ರೋಗಿಗಳು ಸಾಯುತ್ತಿದ್ದಾರೆ. ಇದು ರೋಗ ನಿರೋಧಕ ರೀತಿಯಲ್ಲಿ ಕೈ ತೊಳೆಯುವ ಅಗತ್ಯತೆಯನ್ನು ಮನದಟ್ಟು ಮಾಡುತ್ತದೆ. 2008ರಲ್ಲಿ ಮೊದಲ ಬಾರಿ ಪ್ರಾರಂಭಗೊಂಡ ವಿಶ್ವ ಕೈ ತೊಳೆಯುವ ದಿನಾಚರಣೆ ಇಂದು 51 ದೇಶಗಳಲ್ಲಿ ಆಚರಿಸಲ್ಪಡುತ್ತಿದೆ ಎಂದು ಡಾ.ದಯಾನಂದ್ ವಿವರಿಸಿದರು.

ಕೈ ತೊಳೆಯುವ ಪ್ರಕ್ರಿಯೆಯಲ್ಲಿ ಗಿನ್ನೆಸ್ ವಿಶ್ವದಾಖಲೆಯನ್ನು ಕಳೆದ ಮೇ ತಿಂಗಳಲ್ಲಿ ಹೊಸದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿತ್ತು. ಅಲ್ಲಿ ಒಟ್ಟು 1,711 ಮಂದಿ ಕೈ ತೊಳೆಯುವ ರಿಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೀಗ ಮಣಿಪಾಲ ವಿವಿ ಹಾಗೂ ಕೆಎಂಸಿ ಅದನ್ನು ಮೀರಿ ಕನಿಷ್ಠ 4,500ರಿಂದ 5,000 ಮಂದಿ ರಿಲೇಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಮಣಿಪಾಲದ ಮರಿನಾ ಕ್ರೀಡಾ ಸಂಕೀರ್ಣದಲ್ಲಿ ಬೆಳಗ್ಗೆ 7 ಗಂಟೆಗೆ ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಈ ವಿಶ್ವದಾಖಲೆಯ ಪ್ರಯತ್ನಕ್ಕೆ ಚಾಲನೆ ನೀಡಿದರು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಮಾರ್ಗದರ್ಶಿ ಸೂತ್ರದಂತೆ, ಅವರ ಸೂಚನೆಯಂತೆ ಇಡೀ ಪ್ರಕ್ರಿಯೆಯನ್ನು ವೀಡಿಯೊ ದಾಖಲೀಕರಣ ಮಾಡಿಕೊಳಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಐವರು ಮಾನ್ಯತೆ ಪಡೆದ ನ್ಯಾಯವಾದಿಗಳು ಇಡೀ ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು. ಅಲ್ಲದೇ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವೈದ್ಯರ ಸಮ್ಮುಖದಲ್ಲಿ ಇಡೀ ಪ್ರಕ್ರಿಯೆ ನಡೆಯುತ್ತಿದೆ ಎಂದವರು ತಿಳಿಸಿದರು.

ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಮಣಿಪಾಲ ವಿವಿ ಆಡಳಿತಕ್ಕೊಳಪಡುವ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಅಲ್ಲದೇ ಮಂಗಳೂರಿನ ಕಸ್ತೂರ್‌ಬಾ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು ರಿಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಭಾಗವಹಿಸುವ ಪ್ರತಿಯೊಬ್ಬರು ಕ್ಯಾಮರಾ ಹಾಗೂ ಸಾಕ್ಷಿಗಳ ಎದುರು ಆಲ್ಕೋಹಾಲ್ ಮೂಲದ ದ್ರಾವಕದಿಂದ ಕನಿಷ್ಠ 10 ಸೆಕೆಂಡ್ ಕಾಲದ ಆರು ಹಂತದಲ್ಲಿ ಕೈಯನ್ನು ತೊಳೆದು ದ್ರಾವಕದ ಬಾಟ್ಲಿಯನ್ನು ಮುಂದಿನವರಿಗೆ ದಾಟಿಸಬೇಕಾಗುತ್ತದೆ. ಆಲ್ಕೋಹಾಲ್ ದ್ರಾವಕದಲ್ಲಿ ಕನಿಷ್ಠ 10 ಸೆಕೆಂಡ್, ಬರೀ ನೀರಿನಲ್ಲಾದರೆ 20 ಸೆ. ಕೈಯನ್ನು ತೊಳೆಯಬೇಕೆಂಬುದು ಕ್ರಮ. ಇದನ್ನು ಆಸ್ಪತ್ರೆಗಳಲ್ಲಿ ಮಾತ್ರವಲ್ಲ ಮನೆಗಳಲ್ಲೂ ಕೈತೊಳೆಯುವ ವೇಳೆ ಅನುಸರಿಸಬೇಕು ಎಂದು ಡಾ.ದಯಾನಂದ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News