ಊರ ಜಾತ್ರೆಯ ಸ್ವರೂಪ ಪಡೆದ ಬ್ರಹ್ಮಾವರ ಕೃಷಿ ಮೇಳ
ಬ್ರಹ್ಮಾವರ, ಅ.15: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ, ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ವತಿಯಿಂದ ಪ್ರತಿ ವರ್ಷ ನಡೆಯುವ ಕೃಷಿ ಮೇಳ ಇದೀಗ ಅತ್ಯಂತ ಜನಪ್ರಿಯವಾಗಿದ್ದು, ವಯೋಮಾನದ ಪರಿವೇ ಇಲ್ಲದೇ ಭಾರೀ ಜನರನ್ನು ಆಕರ್ಷಿಸುತ್ತಿದೆ.
ಇಂದು ಮತ್ತು ನಾಳೆ ನಡೆಯುವ ಈ ಬಾರಿಯ ವಸ್ತುಪ್ರದರ್ಶನಕ್ಕೆ ಇಂದು ಬೆಳಗಿನಿಂದಲೇ ಜನರು ಸಾಗರೋಪಾದಿಯಲ್ಲಿ ಹರಿದು ಬಂದರು. ಕೇವಲ ಉಡುಪಿ ಮಾತ್ರವಲ್ಲದೇ ದ.ಕ. ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಆಸುಪಾಸಿನ ಜನರು ಗುಂಪು ಗುಂಪಾಗಿ ಭೇಟಿ ನೀಡುತ್ತಿದ್ದಾರೆ.
ಗ್ರಾಮೀಣ ಭಾಗದ ಜನರು, ಕೃಷಿಕರು, ಕೃಷಿಯಲ್ಲಿ ಆಸಕ್ತಿ ಇರುವವರು, ಕೃಷಿಯಲ್ಲಿ ಹೊಸತನ್ನು ನಿರೀಕ್ಷಿಸಿ ಬರುವವರು ಅಧಿಕ ಸಂಖ್ಯೆಯಲ್ಲಿ ನೆರೆದು ಕೃಷಿ ಮೇಳಕ್ಕೆ ಜಾತ್ರೆಯ ಮೆರುಗು ನೀಡಿದ್ದಾರೆ. ಹತ್ತಾರು ವರ್ಷಗಳಿಂದ ಕರಾವಳಿಯಲ್ಲಿ ಏಕೈಕ ಎನಿಸಿ ನಿರಂತರವಾಗಿ ನಡೆಯುತ್ತಿರುವ ಈ ಕೃಷಿ ಮೇಳವನ್ನು ಜನತೆ ಊರ ಜಾತ್ರೆಯೆಂತೆಯೇ ಪರಿಗಣಿಸಿದ್ದಾರೆ. ಮೇಳಕ್ಕೆ ಭೇಟಿ ನೀಡುವ ಜನರ ಉತ್ಸಾಹ ನೋಡಿದಾಗ ಇದು ಖಚಿತವಾಗುತ್ತದೆ.
ಈಗಲೂ ಕೃಷಿಯಲ್ಲಿ ತೊಡಗಿಸಿಕೊಂಡವರು, ಆಸಕ್ತಿಯನ್ನು ಉಳಿಸಿಕೊಂಡವರು ಪ್ರತಿವರ್ಷ ತಪ್ಪದೇ ಈ ಮೇಳಕ್ಕೆ ಭೇಟಿ ನೀಡುತ್ತಿದ್ದು, ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ನೂತನ ಉಪಕರಣ, ಯಂತ್ರೋಪಕರಣ, ಗೊಬ್ಬರಗಳ ಮಾಹಿತಿಗಳನ್ನು ಪಡೆದುಕೊಂಡು ತಮಗೆ ಬೇಕಾದ ಸಾಮಗ್ರಿಗಳ ಖರೀದಿಗೆ ಬೇಕಾದ ಸಿದ್ಧತೆ ನಡೆಸುತ್ತಾರೆ. ಹತ್ತು ವರ್ಷಗಳಿಂದ ತಪ್ಪದೇ ಭೇಟಿ ನೀಡುವ ಸುಳ್ಯದ ಸುಬ್ಬಣ್ಣ ರೈ ಅವರು ಕೂಡಾ ಮೇಳದಲ್ಲಿರುವ ಹತ್ತಾರು ಮಳಿಗೆಗಳಿಗೆ ಭೇಟಿ ನೀಡಿ ಚರ್ಚಿಸುತ್ತಿದ್ದರು.
ಕೇಂದ್ರದ ಆವರಣದಲ್ಲಿ ತೆರೆದಿರುವ ನೂರಕ್ಕೂ ಅಧಿಕ ವಿವಿಧ ಮಳಿಗೆಗಳು ಜನರ ಆಕರ್ಷಣೆಯ ಕೇಂದ್ರವಾಗಿದ್ದು, ಇಂದು ಅಧಿಕ ಸಂಖ್ಯೆಯಲ್ಲಿದ್ದ ಮಹಿಳೆಯರು ಮತ್ತು ಯುವಕರು ಈ ಮಳಿಗೆಯಲ್ಲಿ ತುಂಬಿಕೊಂಡಿದ್ದರು. ಅಲ್ಲದೇ ವ್ಯಾಪಾರಿಗಳಿಗೂ ಇಲ್ಲಿನ ಜನರನ್ನು ನೋಡಿ ಹೊಸ ಉತ್ಸಾಹ ಬಂದಿದೆ. ಎರಡು ದಿನಗಳ ಮೇಳದಲ್ಲಿ 50,000ಕ್ಕೂ ಅಧಿಕ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.
ಮೇಳದಲ್ಲಿ ವಿವಿಧ ಭತ್ತದ ತಳಿಗಳು ಮತ್ತು ಬೀಜೋತ್ಪಾದನೆ, ಭತ್ತದಲ್ಲಿ ಚಾಪೆ ನೇಜಿ ತಯಾರಿ ಮತ್ತು ಶ್ರೀಪದ್ಧತಿ ಬೇಸಾಯ, ವಿವಿಧ ಗೊಬ್ಬರಗಳ ತಯಾರಿ, ಬಹುಬೆಳೆ ಯೋಜನೆ ಹಾಗೂ ಪೋಷಕಾಂಶ ನಿರ್ವಹಣೆಗಳ ಮಾಹಿತಿ ಈ ಪ್ರದರ್ಶನದಲ್ಲಿ ಸಿಗುತ್ತಿವೆ. ಅಲ್ಲದೇ ಹೈನುಗಾರಿಕೆ, ಮೀನುಗಾರಿಕೆ, ಆಡು, ಮೊಲ, ಕೋಳಿ ಸಾಕಾಣಿಕೆಯ ಕುರಿತು ಪ್ರಾತ್ಯಕ್ಷಿಕೆ, ಕೃಷಿಯಲ್ಲಿ ದೈನಂದಿನ ಬಳಕೆಗೆ ಉಪಯುಕ್ತ ಯಂತ್ರೋಪಕರಣಗಳ ಮಳಿಗೆ ಜನರಿಗೆ ತುಂಬಿತ್ತು.